ಬೆಳಗಾವಿ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ರಾಜಕೀಯ ಬದ್ಧ ವೈರಿ ಲಕ್ಷ್ಮೀ ಹೆಬ್ಬಾಳ್ಕರ್ ಮಣಿಸಲು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಗಿ ಶ್ರದ್ಧಾ ಶೆಟ್ಟರ್ ಅವರನ್ನು ಕಣಕ್ಕಿಳಿಸಲು ರಮೇಶ್ ಜಾರಕಿಹೊಳಿ ಒಲವು ತೋರಿದ್ದಾರೆ. ಈ ಸಂಬಂಧ ಆರ್.ಎಸ್.ಎಸ್ ನಾಯಕರು ಹಾಗೂ ರಾಜ್ಯ ಮಟ್ಟದ ನಾಯಕರ ಜೊತೆಗೂ ರಮೇಶ್ ಜಾರಕಿಹೊಳಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆನ್ನುವ ಮಾಹಿತಿಯಿದೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಆಕ್ಟಿವ್ ಆದ ಶ್ರದ್ಧಾ ಶೆಟ್ಟರ್ ದಿ. ಸುರೇಶ ಅಂಗಡಿ ಅವರ ಕಿರಿಯ ಪುತ್ರಿ ಆಗಿರುವ ಶ್ರದ್ಧಾ ಶೆಟ್ಟರ್, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೊಸೆ ಕೂಡ ಹೌದು. ಇತ್ತೀಚೆಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ವಿವಿಧೆಡೆ ಸಂಚರಿಸುತ್ತಿರುವ ಶ್ರದ್ಧಾ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಹೆಚ್ಚು ಆ್ಯಕ್ಟಿವ್ ಆಗಿದ್ದಾರೆ.
ದಸರಾ ವೇಳೆ ದುರ್ಗಾಮಾತಾ ದೌಡ್ ಕಾರ್ಯಕ್ರಮದಲ್ಲಿ ಬಹುತೇಕ ಗ್ರಾಮಗಳಿಗೆ ಶ್ರದ್ಧಾ ಶೆಟ್ಟರ್ ಭೇಟಿ ನೀಡಿದ್ದರು. ಸುರೇಶ್ ಅಂಗಡಿ ಕೂಡ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರ ಜೊತೆ ಹೆಚ್ಚಿನ ಒಡನಾಟ ಹೊಂದಿದ್ದರು. ಇದನ್ನೇ ಲಾಭವಾಗಿಟ್ಟುಕೊಂಡು ಲಕ್ಷ್ಮೀ ಹೆಬ್ಬಾಳ್ಕರ್ ಸೋಲಿಸಲು ರಮೇಶ್ ಜಾರಕಿಹೊಳಿ ಪ್ಲಾನ್ ಮಾಡಿದ್ದಾರೆ. ಅಲ್ಲದೇ ಇದೇ ವಿಚಾರಕ್ಕೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ರಮೇಶ್ ಜಾರಕಿಹೊಳಿ ಆಪ್ತರು ಶ್ರದ್ಧಾ ಶೆಟ್ಟರ್ ಅವರನ್ನು ಭೇಟಿಯಾಗಿದ್ದಾರೆ. ಮುಂಬರುವ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮನವಿ ಮಾಡಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ:ರಾಷ್ಟ್ರಪತಿ, ಪ್ರಧಾನಿ, ನಾನು ಆರ್‌ಎಸ್‌ಎಸ್‌ನಿಂದ ಬಂದವರು: ಬಿ.ಎಸ್.ಯಡಿಯೂರಪ್ಪ
ತಾವು ರಮೇಶ್ ಜಾರಕಿಹೊಳಿ ಜೊತೆ ಚರ್ಚಿಸಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಬಿಜೆಪಿ ವರಿಷ್ಠರಿಗೂ ಮನವಿ ಮಾಡುತ್ತೇವೆ. ನೀವು ಚುನಾವಣೆಗೆ ತಯಾರಿ ಆರಂಭಿಸಿ ಅಂತ ಬೆಂಬಲಿಗರು ಮನವಿ ಮಾಡಿದ್ದಾರೆ ಎನ್ನುವ ಮಾಹಿತಿಯಿದೆ. ನನ್ನ ಸ್ಪರ್ಧೆ ಬಗ್ಗೆ ಹೈಕಮಾಂಡ್, ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದಷ್ಟೇ ಶ್ರದ್ಧಾ ತಿಳಿಸಿದ್ದಾರೆ. ಮತ್ತೊಂದೆಡೆ 'ಶ್ರದ್ಧಾ ಶೆಟ್ಟರ್ ಮುಂದಿನ ಎಂಎಲ್‌ಎ' ಎಂಬ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.