ಬೆಳಗಾವಿ: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಇಂದು ಒಂದೇ ವೇದಿಕೆಯ ಮೇಲೆ ಮತಯಾಚನೆ ಮಾಡಿ ಅಚ್ಚರಿ ಮೂಡಿಸಿದರು. ಸಮಯ ಬೇರೆಯಾದರೂ ಸಹೋದರರ ವ್ಯತರಿಕ್ತ ಹೇಳಿಕೆಯಿಂದ ಮತದಾರರಲ್ಲಿ ಗೊಂದಲ ಉಂಟಾಯಿತು.
ರಮೇಶ್ ಜಾರಕಿಹೊಳಿ ಲಖನ್ ಜಾರಕಿಹೊಳಿ ಪ್ರಚಾರ : ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ರಮೇಶ್ ಜಾರಕಿಹೊಳಿ ಪರಿಷತ್ ಚುನಾವಣಾ ಪ್ರಚಾರ ನಡೆಸಿ ತೆರಳಿದ ಅರ್ಧ ಗಂಟೆ ಬಳಿಕ ಅದೇ ವೇದಿಕೆಗೆ ಲಖನ್ ಆಗಮಿಸಿ ಪ್ರಚಾರದಲ್ಲಿ ಭಾಗಿಯಾದರು. ರಮೇಶ್ ಮಾತನಾಡಿ ಮೊದಲನೇ ಮತ ಬಿಜೆಪಿಗೆ ಹಾಕಿ, ಎರಡನೇ ಮತ ಕಾಂಗ್ರೆಸ್ ಸೋಲಿಸಲು ಹಾಕಿ ಎಂದು ಕರೆ ನೀಡಿದರು.
ಅವ್ರು ಯಾರಿಗೆ ಮತ ಹಾಕ್ಬೇಕು ಅಂತ ನಿಮ್ಗೆ ಹೇಳಿದ್ದಾರೆ : ಲಖನ್ ಮಾತನಾಡಿ, ಒಂದನೇ ಮತ ನನಗೆ ಹಾಕಿ, ಎರಡನೇ ಮತ ಯಾರಿಗೆ ಹಾಕಬೇಕು ಎಂದು ಈಗಾಗಲೇ ನಿಮಗೆ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ನೀವು ನನ್ನ ಗೆಲ್ಲಿಸಿಕೊಟ್ಟರೇ ರಮೇಶ್ ಅವರ ಶಕ್ತಿಯೂ ಜಾಸ್ತಿ ಆಗುತ್ತೆ. ನಿಮ್ಮ ಕೆಲಸ ಕಾರ್ಯ ಮಾಡಲು ಅವರಿಗೆ ಇನ್ನೂ ಹೆಚ್ಚಿನ ಉತ್ಸಾಹ ಬರುತ್ತದೆ. ನಾನು ಓಪನ್ ಆಗಿ ಹೇಳಲ ಬರಲ್ಲ, ಈಗಷ್ಟೇ ನಿಮಗೆ ಬಂದು ಹೇಳಿ ಹೋಗಿದ್ದಾರೆ ಎಂದರು.
ಮೊದಲಿನಿಂದಲೂ ನೀವು ಸಹಕಾರ ಕೊಡುತ್ತಿದ್ದೀರಿ. ಅವರು ಏನೇ ಹೇಳಲಿ, ಅದಕ್ಕೆಲ್ಲ ನಾವು ತಲೆಕೆಡಿಸಿಕೊಳ್ಳಲ್ಲ. ತಾವೆಲ್ಲರೂ ಬುದ್ಧಿವಂತ ಮತದಾರರು. ಬೆಳಗಾವಿ ಗ್ರಾಮೀಣ ಅತಿ ದೊಡ್ಡ ಕ್ಷೇತ್ರ. ಅಭಿವೃದ್ಧಿ ಆಗಬೇಕಂದ್ರೆ ಯಾರಿಗೆ ಮತ ಹಾಕಬೇಕು ಅನ್ನೋದನ್ನು ಎಲ್ಲ ಪಂಚಾಯತ್ ಸದಸ್ಯರಿಗೆ ತಿಳಿ ಹೇಳಿ. ಎಲೆಕ್ಷನ್ ಬಂದಾಗ ಕಾಲು ಬೀಳುತ್ತಾರೆ, ಆಮೇಲೆ ನಿಮ್ಮ ಕಾಲು ಜಗ್ಗುತ್ತಾರೆ. ಯಾವುದೇ ಆಸೆ ಆಮಿಷಕ್ಕೆ ಒಳಗಾಗದೇ ಮತ ಚಲಾಯಿಸಬೇಕು. ಪಂಚಾಯತ್ ಇರಲಿ, ವೈಯಕ್ತಿಕ ಇರಲಿ ನಿಮ್ಮ ಕೆಲಸ ಮಾಡುತ್ತೇವೆ. ನಮಗೆ ಜನ ಸಂಪರ್ಕ ಮುಖ್ಯ ಎಂದು ಲಖನ್ ಜಾರಕಿಹೊಳಿ ಹೇಳಿದ್ರು.