ಬೆಳಗಾವಿ: ಎರಡು ಕುಟುಂಬಗಳ ಮಧ್ಯೆ ನಡೆದ ಘರ್ಷಣೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ನಡೆದಿದೆ.
ರಾಜು ತಳವಾರ ಹಾಗೂ ಅದೇ ಗ್ರಾಮದ ಚಿಕ್ಕುಗೋಳ ಕುಟಂಬಗಳ ಮಧ್ಯೆ ಮಾರಾಮಾರಿ ನಡೆದಿದೆ. ರಾಜು ತಳವಾರ ಕುಟಂಬಸ್ಥರು ಚಿಕ್ಕುಗೋಳ ಕುಟುಂಬಸ್ಥರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಘಟನೆಯಲ್ಲಿ ಸಂಜು ಚಿಕ್ಕುಗೋಳ, ಆಕಾಶ ಚಿಕ್ಕುಗೋಳ, ಅಕ್ಷಯ್ ಚಿಕ್ಕುಗೋಳ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾರಕಾಸ್ತ್ರ ಮತ್ತು ದಾಖಲೆರಹಿತ 83 ಲಕ್ಷ ರೂ. ಪತ್ತೆ:
ಈ ಘಟನೆ ಬಳಿಕ ಎಚ್ಚೆತ್ತ ಅಂಕಲಗಿ ಠಾಣೆ ಪೊಲೀಸರು, ರಾಜು ಅಂಕಲಗಿ ಮನೆ ಮೇಲೆ ದಾಳಿ ನಡೆಸಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ವೇಳೆ ಇಪ್ಪತ್ತಕ್ಕೂ ಅಧಿಕ ಲಾಂಗು-ಮಚ್ಚು, ಕುಡಗೋಲು ಪತ್ತೆಯಾಗಿವೆ. ಜೊತೆಗೆ ಆರೋಪಿ ಮನೆಯಲ್ಲಿ 83 ಲಕ್ಷ ರೂ. ನಗದು ಕೂಡ ಪತ್ತೆಯಾಗಿದ್ದು, ದಾಖಲೆರಹಿತ ಹಣವನ್ನು ಮನೆಯಲ್ಲಿಟ್ಟುಕೊಂಡಿರುವ ರಾಜು ತಳವಾರ ವಿರುದ್ಧ ಪ್ರತ್ಯೇಕ ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಅಂಕಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ:ಐಫೋನ್ ತಯಾರಿಕಾ ಕಾರ್ಖಾನೆ ದಾಂಧಲೆ ಪ್ರಕರಣ: ಸೂಕ್ತ ಕ್ರಮಕ್ಕೆ ಮುಂದಾದ ಸಿಎಂ
ಘಟನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಂಜು ಚಿಕ್ಕುಗೋಳ, ನಾವು ಊರಲ್ಲಿ ಓಡಾಡುವಾಗ ರಾಜು ತಳವಾರ ಹಾಗೂ ಕುಟುಂಬಸ್ಥರು ವಾಹನಗಳನ್ನು ಮೈಮೇಲೆ ತರುತ್ತಾರೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಮಾರಕಾಸ್ತ್ರ ಹಾಗೂ ಖಾರದಪುಡಿ ಎರಚಿ ನಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದರು.