ಬೆಳಗಾವಿ: ಸ್ಮಶಾನಕ್ಕೆ ತೆರಳಲು ದಾರಿ ಇಲ್ಲದಿದ್ದಕ್ಕೆ ಸವದತ್ತಿ ತಾಲೂಕಿನ ಏಣಗಿ ಗ್ರಾಮಸ್ಥರು ಡಿಸಿ ಕಚೇರಿ ಆವರಣದಲ್ಲಿ ಮೃತದೇಹ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಏಣಗಿ ಗ್ರಾಮದ ಅಬ್ದುಲ್ ಖಾದರ್ ಮಿಶ್ರಿಕೋಟಿ(65) ಮೃತದೇಹ ಇಟ್ಟು ಪ್ರತಿಭಟನೆ ನಡೆಸಿದರು. ಮೃತರ ಸಂಬಂಧಿ ಇಬ್ರಾಹಿಂ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದು, ಸ್ಮಶಾನಕ್ಕೆ ಹಾದಿ ಕೊಡದ ಹಿನ್ನೆಲೆ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಗ್ರಾಮದಲ್ಲಿ ಹಿಂದೂ, ಮುಸ್ಲಿಂ ಎರಡೂ ಸಮುದಾಯದ ಸ್ಮಶಾನಗಳಿಗೆ ತೆರಳಲು ರಸ್ತೆ ಇಲ್ಲ. ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಕಳೆದ ಐವತ್ತು ವರ್ಷಗಳಿಂದ ಸರ್ಕಾರಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಬೆಳಗಾವಿ ಡಿಸಿ ಕಚೇರಿಗೆ ಮೃತದೇಹ ತಂದು ಪ್ರತಿಭಟನೆ ಮಾಡ್ತಿದ್ದೇವೆ. ಸೂಕ್ತಕ್ರಮ ಕೈಗೊಳ್ಳದಿದ್ದರೆ ಇಲ್ಲೇ ಸಮಾಧಿ ಮಾಡ್ತೀವಿ ಎಂದು ಸಂಬಂಧಿಕರು, ಗ್ರಾಮಸ್ಥರು ಪಟ್ಟು ಹಿಡಿದಿದ್ದರು.