ಬೆಳಗಾವಿ: ಪತಿಯ ಕುಟುಂಬಸ್ಥರ ನಿರಂತರ ಕಿರುಕುಳಕ್ಕೆ ಬೇಸತ್ತ ಐದು ತಿಂಗಳ ಗರ್ಭಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಗೋಕಾಕ್ ನಗರದ ದೀಪಾ ನ್ಯಾಮಗೌಡ ಪಾಟೀಲ (20) ಮೃತ ದುರ್ದೈವಿ. ಮನೆಯ ಬೆಡ್ ರೂಂನ ಫ್ಯಾನ್ಗೆ ನೇಣು ಬಿಗಿದುಕೊಂಡ ದೀಪಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬಸ್ಥರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ರೂ ಮಾರ್ಗ ಮಧ್ಯೆ ದೀಪಾ ಸಾವನ್ನಪ್ಪಿದ್ದಾಳೆ.
ಐದು ತಿಂಗಳ ಗರ್ಭಿಣಿ ಆತ್ಮಹತ್ಯೆ ಶರಣು ಸೀಮಂತ ಕಾರ್ಯಕ್ರಮ ವೇಳೆ ತವರು ಮನೆಯಿಂದ ಚಿನ್ನದ ಉಂಗುರ ತರುವಂತೆ ಪತಿ ನ್ಯಾಮಗೌಡ ಪೀಡಿಸುತ್ತಿದ್ದನಂತೆ. ಕೊರೊನಾ ಹಿನ್ನೆಲೆಯಲ್ಲಿ ದೀಪಾ ಕುಟುಂಬಸ್ಥರಿಗೆ ಮಗಳ ಕಡೆಗೆ ಬರಲು ಸಾಧ್ಯವಾಗಿಲ್ಲ. ಇದರಿಂದ ಪತಿ ಸೇರಿ ಕುಟುಂಬಸ್ಥರು ನಿರಂತರ ಮಾನಸಿಕ ಕಿರುಕುಳ ನೀಡಿದ್ದರಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ದೀಪಾಳ ಪೋಷಕರು ಆರೋಪಿಸಿದ್ದಾರೆ.
ಗೋಕಾಕ್ ಶಹರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.