ಬೆಳಗಾವಿ: ಸುವರ್ಣಸೌಧದಲ್ಲಿ ನಡೆಯುವ ಅಧಿವೇಶನಕ್ಕೆ ಆಗಮಿಸುವ ಕೆಲ ಶಾಸಕರು, ಸಚಿವರು ರಜೆಯ ಸಮಯದಲ್ಲಿ ಗೋವಾಕ್ಕೆ ತೆರಳಿ ಅಲ್ಲಿ ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ ಎಂದು ಸಾಮಾಜಿಕ ಹೋರಾಟಗಾರ ರಾಜಶೇಖರ್ ಮುಲಾಲಿ ಆರೋಪಿಸಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸುವರ್ಣಸೌಧದಲ್ಲಿ ನಡೆಯುವ ಅಧಿವೇಶನಕ್ಕೆ ಆಗಮಿಸುವ ಶಾಸಕರು, ಸಚಿವರು ರಜೆ ಸಮಯದಲ್ಲಿ ಗೋವಾ ರಾಜ್ಯಕ್ಕೆ ತೆರಳಿ ಅಲ್ಲಿ ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಅದಕ್ಕಾಗಿ ಮಾಧ್ಯಮಗಳ ಮೂಲಕ ಜನಪ್ರತಿನಿಧಿಗಳಿಗೆ ಎಚ್ಚರಿಕೆಯ ಸಂದೇಶ ನೀಡುತ್ತಿದ್ದೇನೆ ಎಂದರು.
ರಾಜಕಾರಣಿಗಳು ಗೋವಾದಲ್ಲಿ ಅನೈತಿಕ ಚಟುವಟಿಕೆಗಳಲ್ಲಿ ಭಾಗಿ ರಮೇಶ್ ಜಾರಕಿಹೊಳಿ ಬಲಿಪಶು:
ರಮೇಶ್ ಜಾರಕಿಹೊಳಿ ಸಿಡಿ ಇಡೀ ಪ್ರಕರಣ ಷಡ್ಯಂತ್ರದಿಂದ ಕೂಡಿದ್ದು. ಈ ಪ್ರಕರಣದಲ್ಲಿ ರಮೇಶ ಜಾರಕಿಹೊಳಿ ಅವರನ್ನು ಬಲಿಪಶು ಮಾಡಲಾಗಿದೆ ಎಂಬ ಸಂಶಯ ವ್ಯಕ್ತವಾಗಿದೆ ಎಂದು ಮುಲಾಲಿ ಹೇಳಿದರು.
ಉ.ಕ. ಮತ್ತು ಹೈ.ಕ ರಾಜಕಾರಣಿಗಳು ತಾಂತ್ರಿಕವಾಗಿ ಮುಗ್ಧರು
ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ರಾಜಕಾರಣಿಗಳು ತಾಂತ್ರಿಕವಾಗಿ ಮುಗ್ಧರಿದ್ದಾರೆ. ಒರಟು ಸ್ವಭಾವ, ಬಿಚ್ಚು ಮನಸ್ಸಿನವರಿದ್ದಾರೆ. ಹೀಗಾಗಿ ಅವರು ಷಡ್ಯಂತ್ರಕ್ಕೊಳಗಾಗುತ್ತಿದ್ದಾರೆ. ರಮೇಶ ಜಾರಕಿಹೊಳಿ ಮುಂದೆ ರಾಜಕೀಯವಾಗಿ ಬೆಳೆಯಬಾರದು ಹಾಗೂ ಮುಂದಿನ ಸಿಎಂ ಅಭ್ಯರ್ಥಿಯಾಗಬಹುದು ಎನ್ನುವ ಉದ್ದೇಶದ ಹಿನ್ನೆಲೆಯಲ್ಲಿ ಈ ಸಿಡಿಯನ್ನು ಬಿಡುಗಡೆ ಮಾಡಿರುವ ಬಗ್ಗೆ ಸಂಶಯ ಮೂಡುತ್ತಿದೆ ಎಂದರು.
19 ಸಿಡಿ ಇವೆ ಎಂದು ಇಲ್ಲೂ ನಾನು ಹೇಳಿಲ್ಲ
ನನ್ನ ಬಳಿ 19 ರಾಜಕಾರಣಿಗಳ ಸಿಡಿ ಇದೆ ಎಂದು ಎಲ್ಲಿಯೂ ಕೂಡಾ ಉಲ್ಲೇಖ ಮಾಡಿಲ್ಲ. ಆದ್ರೆ, ಮಂಡ್ಯದ ಕೆ.ಎಚ್.ಇಂದಿರಾ ಎಂಬುವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಯಾಕೆ ದೂರು ಕೊಟ್ಟರು ಅಂತಾ ಗೊತ್ತಿಲ್ಲ. ಅವರ ಹಿಂದೆ ಮಾಜಿ ಸಿಎಂ ಒಬ್ಬರು ಇದ್ದಾರೆ. ನನ್ನ ಬಳಿ ಸಿಡಿಗಳಿವೆ ಎಂದು ನಾನು ಎಲ್ಲೂ ಹೇಳಿಲ್ಲ. ನನ್ನ ಮೇಲೆ ದೂರು ನೀಡಿದವರ ವಿರುದ್ಧ ಮಾನಹಾನಿ ಕೇಸ್ ಹಾಕುತ್ತೇನೆ ಎಂದು ಮುಲಾಲಿ ಎಚ್ಚರಿಕೆ ರವಾನಿಸಿದರು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಹೋರಾಟದ ನೇತೃತ್ವ
ತೆರಿಗೆ ಕಟ್ಟೋದು ಉತ್ತರ ಕರ್ನಾಟಕ ಜನರು. ಆದ್ರೆ, ಮಜಾ ಮಾಡೋದು ಆ ಭಾಗದ ಜನರು. ಇದೇ ರೀತಿ ಮುಂದುವರೆದ್ರೆ ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಹೋರಾಟದ ನೇತೃತ್ವವನ್ನು ವಹಿಸುತ್ತೇನೆ ಎಂದು ದಕ್ಷಿಣದ ರಾಜಕಾರಣಿಗಳ ವಿರುದ್ಧ ಸಾಮಾಜಿಕ ಹೋರಾಟಗಾರ ರಾಜಶೇಖರ ಮಲಾಲಿ ವಾಗ್ದಾಳಿ ನಡೆಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಭ್ರಷ್ಟಾಚಾರ, ಸ್ವಜನಪಕ್ಷಪಾತದಲ್ಲಿ ಮುಳುಗಿದೆ:
ಕನ್ನಡ ಸಾಹಿತ್ಯ ಪರಿಷತ್ ರಾಜಕಾರಣದ ಸಂಕೋಲೆಗೆ ಸಿಲುಕಿ ಭ್ರಷ್ಟಾಚಾರ, ಸ್ವಜನಪಕ್ಷಪಾತದಲ್ಲಿ ಮುಳುಗಿದೆ. ಹೀಗಾಗಿ ಕನ್ನಡ ಸಾಹಿತ್ಯವನ್ನು ಭ್ರಷ್ಟಾಚಾರ ಮುಕ್ತ ಮಾಡುವ ನಿಟ್ಟಿನಲ್ಲಿ ಗಡಿ ಗಲಾಟೆ, ನೆಲ- ಜಲ ವಿವಾದಗಳು, ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಸಮಸ್ಯೆ ಸೇರಿದಂತೆ ಹಲವು ವಿಚಾರಗಳನ್ನು ಇಟ್ಟುಕೊಂಡು ಸಾಹಿತ್ಯ ಪರಿಷತ್ ಚುನಾವಣೆಗೆ ಸ್ಪರ್ಧಿಸುವುದಾಗಿ ಮುಲಾಲಿ ತಿಳಿಸಿದರು.