ಬೆಳಗಾವಿ:ಅಗ್ನಿಪಥ್ ಯೋಜನೆ ವಿರೋಧಿಸಿ ಕುಂದಾ ನಗರಿಯಲ್ಲಿ ನಡೆಯಲಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ನೂರಾರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಗರದ ಕೋಟೆ ಕೆರೆ ಆವರಣದಲ್ಲಿ ಜಮಾವಣೆಗೊಳ್ಳಲು ಆಗಮಿಸಿದ್ದ ಯುವಕರು ಸಾರಿಗೆ ಬಸ್ಸಿನಲ್ಲಿ ಆಗಮಿಸುತ್ತಿದ್ದರು. ಈ ವೇಳೆ ಯುವಕರನ್ನು ವಶಕ್ಕೆ ಪಡೆದ ಪೊಲೀಸರು, ಎಪಿಎಂಸಿಯ ಕೆಎಸ್‌ಆರ್‌ಪಿ ಮೈದಾನಕ್ಕೆ ಕರೆತಂದು ಇಲ್ಲಿನ ಬಸವೇಶ್ವರ ದೇವಸ್ಥಾನದಲ್ಲಿ ಅವರನ್ನು ಕೂಡಿ ಹಾಕಿದ್ದಾರೆ. ನಗರದ ವಿವಿಧೆಡೆ ಗುಂಪು ಸೇರಿ ನಿಂತಿದ್ದ ಯುವಕರನ್ನು ಸಹ ವಶಕ್ಕೆ ಪಡೆದು ಕರೆತರುತ್ತಿದ್ದಾರೆ.
ಬೆಳಗಾವಿಯಲ್ಲಿ ಪ್ರತಿಭಟನೆಗೆ ಬಂದ ನೂರಾರು ಯುವಕರು ದೇವಸ್ಥಾನದಲ್ಲಿ ಲಾಕ್ ಯುವಕರಿಂದ ಬಸವೇಶ್ವರ ದೇವಾಲಯ ಕೂಡ ಭರ್ತಿ ಆಗಿದೆ. ಮಾಧ್ಯಮಗಳ ಜೊತೆ ಮಾತನಾಡಲೂ ಸಹ ಯುವಕರಿಗೆ ಪೊಲೀಸರು ಅವಕಾಶ ನಿರಾಕರಿಸುತ್ತಿದ್ದಾರೆ. ವಶಕ್ಕೆ ಪಡೆಯಲಾದ ಯುವಕರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ದೇವಸ್ಥಾನದ ಆವರಣವೂ ಭರ್ತಿ ಆಗಿದೆ. ಹೀಗಾಗಿ ಕೆಎಸ್‌ಆರ್‌ಪಿಯ ವಿವಿಧೋದ್ದೇಶ ಸಭಾಭವನಕ್ಕೆ ಯುವಕರನ್ನು ರವಾನಿಸಲಾಗುತ್ತಿದೆ. ವರದಿ ಮಾಡಲು ಬಂದ ಮಾಧ್ಯಮಗಳಿಗೂ ಆವರಣ ಪ್ರವೇಶಕ್ಕೆ ನಿರಾಕರಣೆ ಮಾಡಲಾಗುತ್ತಿದೆ.
ಪ್ರಮುಖವಾಗಿ ಜಿಲ್ಲೆಯ ವಿವಿಧ ತಾಲೂಕಿನ ಗ್ರಾಮಗಳಿಂದ ಆಗಮಿಸಿದ್ದ ಸೇನಾ ಆಕಾಂಕ್ಷಿ ಯುವಕರನ್ನು ಪೊಲೀಸರು ವಶಕ್ಕೆ ಪಡೆದಯಲಾಗಿದೆ. ನಗರದ ಕೇಂದ್ರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಅಶೋಕ ವೃತ್ತ, ಚೆನ್ನಮ್ಮ ವೃತ್ತ ಹಾಗೂ ಮಾರ್ಕೆಟ್ ಪೊಲೀಸ್ ಠಾಣೆ, ಬಸ್ ಸ್ಟ್ಯಾಂಡ್ ರಸ್ತೆ ಸೇರಿದಂತೆ ವಿವಿಧೆಡೆ ಗುಂಪು ಕಟ್ಟಿಕೊಂಡು ನಿಂತಿದ್ದ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ಧಾರೆ. ಯುವಕರನ್ನು ಬೆಳಗಾವಿಯ ಕಂಗ್ರಾಳಿಯ ಕೆಎಸ್‌ಆರ್‌ಪಿ ತರಬೇತಿ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.
ಫೀಲ್ಡಿಗಿಳಿದ ಕಮಿಷನರ್:ಬಂದ್ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಸ್ವತಃ ಫೀಲ್ಡಿಗಿಳಿದಿದ್ದರು. ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಆಯುಕ್ತರು ಸಿಟಿ ರೌಂಡ್ಸ್ ಹೊಡೆದರು. ಬಸ್ ಸ್ಟ್ಯಾಂಡ್ ರಸ್ತೆಯಲ್ಲಿ ಗುಂಪುಗೂಡಿ ನಿಂತಿದ್ದ ಯುವಕರನ್ನು ಅವರು ತರಾಟೆ ತೆಗೆದುಕೊಂಡರು.
ಓದಿ:ಅಗ್ನಿಪಥ್ ಯೋಜನೆ ವಿರೋಧಿಸಿ ಬೆಳಗಾವಿ ಬಂದ್: ರ್‍ಯಾಪಿಡ್ ಆ್ಯಕ್ಷನ್ ಫೋರ್ಸ್‌ನಿಂದ ಪಥ ಸಂಚಲನ