ಅಥಣಿ(ಬೆಳಗಾವಿ):ಅನ್ನಭಾಗ್ಯ ಯೋಜನೆಯಡಿ ಅದೆಷ್ಟೋ ಬಡ ಕುಟುಂಬಗಳು ಜೀವನ ಸಾಗಿಸುತ್ತಿವೆ. ಸರ್ಕಾರ ನೀಡುವ ಅಕ್ಕಿಯಿಂದ ಹೊತ್ತಿನ ಊಟ ಮಾಡುತ್ತಿದ್ದಾರೆ. ಆದರೆ, ಅಥಣಿ ಪಟ್ಟಣದ ಕರ್ನಾಟಕ ರಾಜ್ಯ ಉಗ್ರಾಣ ನಿಗಮದಲ್ಲಿ ದಾಸ್ತಾನಿಟ್ಟ ಅನ್ನಭಾಗ್ಯ ಅಕ್ಕಿ ಹಂದಿಗಳ ಪಾಲಾಗುತ್ತಿದೆ.
ಸೂಕ್ತ ನಿರ್ವಹಣೆ ಇಲ್ಲದೇ ಹಂದಿಗಳು ಮೂಟೆಯಲ್ಲಿದ್ದ ಅಕ್ಕಿಯನ್ನು ತಿಂದು ನಾಶ ಮಾಡುತ್ತಿವೆ. ಉಳಿದ ಅಕ್ಕಿಯನ್ನು ಪಡಿತರದಾರರಿಗೆ ನೀಡುತ್ತಿದ್ದಾರೆ ಎಂಬುದೇ ಆಶ್ಚರ್ಯಕರ ಸಂಗತಿ. ಇದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ.
ಪಟ್ಟಣದ ಎಪಿಎಂಸಿ ಆವರಣದಲ್ಲಿನ ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಶಾಖೆಯಲ್ಲಿ ಪಡಿತರದಾರರಿಗೆ ನೀಡಬೇಕಾದ ಅಕ್ಕಿಯ ಮೂಟೆಗಳನ್ನು ದಾಸ್ತಾನು ಇಡಲಾಗಿದೆ. ಕಟ್ಟಡದ ಹೊರಭಾಗದಲ್ಲಿ ಅಕ್ಕಿಯ ಮೂಟೆಯನ್ನು ಇಟ್ಟಿರುವುದರಿಂದ ಹಂದಿಗಳು ಅಕ್ಕಿಯನ್ನು ತಿನ್ನುತ್ತಿವೆ.
ಆಹಾರ ಸಚಿವರ ಜಿಲ್ಲೆಯಲ್ಲೇ ಅನ್ನಭಾಗ್ಯ ಯೋಜನೆಯ ಅಕ್ಕಿ ಹಂದಿಗಳ ಪಾಲು! ಪಡಿತರದಾರರಿಗೆ ಸೇರಬೇಕಾದ ಅಕ್ಕಿಯನ್ನು ಸೂಕ್ತವಾಗಿ ನಿರ್ವಹಣೆ ಮಾಡಬೇಕಾದ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತಾಳಿದ್ದಾರೆ. ಅಲ್ಲದೇ ಇದೇ ಅಕ್ಕಿಯನ್ನು ಪಡಿತರದಾರರಿಗೆ ಹಂಚಿಕೆ ಮಾಡುತ್ತಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.
ಹಂದಿ ಎಂಜಲು ತಿನ್ನಬೇಕಿದೆ!:'ಹಂದಿಗಳು ತಿಂದಿರುವ ಅಕ್ಕಿಯನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತೆ ಕ್ರೋಢೀಕರಿಸಿ ಪಡಿತರ ಅಂಗಡಿಗಳಿಗೆ ಸರಬರಾಜು ಮಾಡುತ್ತಾರೆ. ಇದರಿಂದ ಫಲಾನುಭವಿಗಳು ಹಂದಿ ಎಂಜಲನ್ನು ತಿನ್ನಬೇಕಾಗಿದೆ. ಹೀಗಾಗಿ ಜನರ ಆರೋಗ್ಯದಲ್ಲಿ ಏರುಪೇರಾದರೆ ಯಾರು ಹೊಣೆ ಎಂದು ವಕೀಲ ಬಾಹುಸಾಹೇಬ ಕಾಂಬಳೆ ಜಿಲ್ಲಾಡಳಿತವನ್ನು ಪ್ರಶ್ನಿಸಿದ್ದಾರೆ.
ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ:ರೈತಮುಖಂಡ ಮಹಾದೇವ ಮಡಿವಾಳ ಮಾತನಾಡಿ, ಅಥಣಿ ತಾಲೂಕಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಅಂದಾದರ್ಬಾರ್ ಮಾಡುತ್ತಿದ್ದಾರೆ. ಜನರ ಆರೋಗ್ಯದ ಮೇಲೆ ಅವರಿಗೆ ಕಾಳಜಿ ಇಲ್ಲ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಬೇಕಾಬಿಟ್ಟಿಯಾಗಿ ಜಾರಿ ಮಾಡಲಾಗುತ್ತಿದೆ. ಇಂಥ ಅಧಿಕಾರಿಗಳನ್ನು ತಕ್ಷಣವೇ ವಜಾ ಮಾಡುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ್ ಕತ್ತಿ ಅವರನ್ನು ಆಗ್ರಹಿಸಿದ್ದಾರೆ.