ಬೆಳಗಾವಿ:ಜಿಲ್ಲೆಯಲ್ಲಿ ಈಚೆಗೆ ಸುರಿದ ಜಡಿ ಮಳೆಗೆ 300ಕ್ಕೂ ಹೆಚ್ಚು ಮನೆಗಳು ಧರೆಗುರುಳಿವೆ ಎನ್ನಲಾಗಿದೆ. ಆದರೆ ತಾಲ್ಲೂಕಿನ ಮಚ್ಚೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಲಕ್ಷೀ ಗಲ್ಲಿ, ಆನಂದ ನಗರ ಹಾಗೂ ಭರತ ಗಲ್ಲಿಯಲ್ಲಿ 5 ಮನೆ ಸೇರಿ ಜಿಲ್ಲೆಯಲ್ಲಿ ಒಟ್ಟು 9 ಮನೆಗಳು ಮಾತ್ರ ಬಿದ್ದಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ನೆರೆ ಪರಿಹಾರಕ್ಕೆ ಪರದಾಟ, ಸಂಕಷ್ಟದಲ್ಲಿ ಕುಂದಾನಗರಿ ಜನರು ಕೆಲವೆಡೆ ಮನೆಗಳ ಗೋಡೆಗಳು ಕುಸಿದ ಪರಿಣಾಮ ಮನೆಯಲ್ಲಿದ್ದ ವಸ್ತುಗಳಿಗೆ ಮಾತ್ರ ಹಾನಿ ಆಗಿದೆ. ಅದೃಷ್ಟವಶಾತ್ ಕುಟುಂಬಸ್ಥರಿಗೆ ಯಾವುದೇ ಪ್ರಾಣಹಾನಿ ಆಗಿಲ್ಲ. ಜಿಲ್ಲಾಡಳಿತ ಈಗ ಬಿದ್ದಿರೋ 9 ಮನೆಗಳ ಸಮೀಕ್ಷೆ ಕಾರ್ಯ ಮಾಡಿಲ್ಲ. ಹೀಗಾಗಿ, ಇನ್ನೆಲ್ಲಿ ಪರಿಹಾರ ಸಿಗುತ್ತದೆ ಅನ್ನೋದು ಜನರ ಗೋಳು.
ಭಾರಿ ಮಳೆಗೆ ಮನೆಗಳು ಬಿದ್ದು ಎರಡ್ಮೂರು ದಿನಗಳೇ ಕಳೆದರೂ ಈವರೆಗೆ ಯಾವೊಬ್ಬ ಅಧಿಕಾರಿಯೂ ಬಿದ್ದ ಮನೆಗಳತ್ತ ಸುಳಿದಿಲ್ಲ. ಜೀವನ ನಿರ್ವಹಣೆಗಾಗಿ ಬೇರೊಂದು ಮನೆಯಲ್ಲಿ ಬಾಡಿಗೆಗಿದ್ದೇವೆ. ಆದರೀಗ ಕೈಯಲ್ಲಿ ಕೆಲಸವಿಲ್ಲ. ಮನೆಗಳ ಗೋಡೆಗಳು ಕುಸಿದಿರೋದ್ರಿಂದ ಜೀವನ ನಡೆಸಲು ಮತ್ತಷ್ಟು ಕಷ್ಟವಾಗಿದೆ. ಹೀಗಾಗಿ ಬಿದ್ದ ಮನೆಗಳನ್ನು ಮರು ನಿರ್ಮಿಸಲು ಸರ್ಕಾರ ಆದಷ್ಟು ಬೇಗ ಪರಿಹಾರ ನೀಡಬೇಕು ಎನ್ನುತ್ತಾರೆ ಲಕ್ಷ್ಮೀ ನಗರದ ನಿವಾಸಿ ಮಲ್ಲಪ್ಪ ಲಾಡ್.
ವರ್ಷ ಕಳೆದರೂ ನೆರೆ ಪರಿಹಾರ ಸಿಗದೆ ಪರದಾಟ:
ಕಳೆದ ವರ್ಷ ಸುರಿದ ಮಳೆಗೆ ಬಿದ್ದ ಮನೆಗಳಿಗೂ ಸರ್ಕಾರದಿಂದ ಇನ್ನೂ ಪರಿಹಾರ ಬರದಿರುವ ಪರಿಣಾಮ ಅವುಗಳನ್ನು ಮತ್ತೆ ಕಟ್ಟಿಕೊಳ್ಳಲು ಜನರು ಪರದಾಡುತ್ತಿದ್ದಾರೆ. ಕಳೆದ ವರ್ಷದಲ್ಲಿ ಅತಿವೃಷ್ಟಿ, ನೆರೆ ಹಾನಿಯಿಂದ ಬಿದ್ದ ಮನೆಗಳಿಗೆ ಈವರೆಗೂ ಪರಿಹಾರ ವಿತರಣೆ ಆಗಿಲ್ಲ. ಇದರಿಂದ ಜಿಲ್ಲೆಯಲ್ಲಿ ನೂರಾರು ಸಂತ್ರಸ್ತರು ಕಣ್ಣೀರು ಸುರಿಸುವಂತಾಗಿದ್ದು, ಕುಟುಂಬದ ಆಸರೆಗಾಗಿ ಹಣ ನೀಡಿ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ.
ಮಳೆಯಿಂದ ಮನೆಗೆ ಹಾನಿಯಾಗಿರುವುದು. ಈ ಕುರಿತು ಮಾತನಾಡಿದ ಬೆಳಗಾವಿ ಡಿಸಿ ಎಂ.ಜಿ. ಹಿರೇಮಠ, ಜಿಲ್ಲೆಯಲ್ಲಿ ಮಳೆ ಕಡಿಮೆ ಆಗಿರುವುದರಿಂದ ರಾಜಾಪೂರ, ದೂಧಗಂಗಾ, ಹಿಡಕಲ್ ಡ್ಯಾಮ್‌ಗೆ ಬರುವ ಒಳಹರಿವು ಕಡಿಮೆ ಆಗಿದೆ. ನೆರೆ ಹಾವಳಿಯಿಂದ ಗ್ರಾಮಗಳಲ್ಲಿನ ಮನೆಗಳಿಗೆ ನೀರು ಹೋಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಅಥಣಿಯಲ್ಲಿ ಈಗಾಗಲೇ ಐದು ಪರಿಹಾರ ಕೇಂದ್ರಗಳನ್ನು ತೆರೆಯಲಾಗಿತ್ತು. ಆದ್ರೆ, ನೀರು ಬರದೇ ಇರುವುದರಿಂದ ಅಲ್ಲಿ ಸ್ಥಳಾಂತರಗೊಂಡ ಕುಟುಂಬಗಳನ್ನು ಮತ್ತೆ ಅವರ ಮನೆಗಳಿಗೆ ಕಳುಹಿಸಲಾಗಿದೆ.
ಜಿಲ್ಲೆಯಲ್ಲಿ 9,558 ಸಾವಿರ ಹೆಕ್ಟೇರ್ ಕೃಷಿ ಜಮೀನಿನಲ್ಲಿ ಬೆಳೆದ ಬೆಳೆ ಹಾನಿಯಾಗಿದೆ. ಈವರೆಗೆ 9 ಮನೆಗಳು ಬಿದ್ದಿವೆ. ಅವುಗಳನ್ನು ಎಂಟ್ರಿ ಮಾಡಿಕೊಂಡು ಆದಷ್ಟು ಬೇಗ ಸಂತ್ರಸ್ತರಿಗೆ ಪರಿಹಾರ ನೀಡಲು ಸೂಚನೆ ನೀಡಲಾಗಿದೆ. ಆದ್ರೆ, ಮನೆಗಳು ಕುಸಿದ ಪರಿಣಾಮ ಯಾರಿಗೂ ಜೀವಹಾನಿ ಸಂಭವಿಸಿಲ್ಲ. ಇದಲ್ಲದೇ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ತಂಡವನ್ನು ರಚನೆ ಮಾಡಿಕೊಂಡು ಮಳೆ ಹಾಗೂ ನೆರೆಯಿಂದ ಅನಾಹುತ ಸಂಭವಿಸಿದರೆ ಸಮೀಕ್ಷೆ ಮಾಡಿ ವರದಿ ನೀಡಲಿದ್ದಾರೆ ಎಂದರು.
ಕಳೆದ ವರ್ಷದಲ್ಲಿ ಬಿದ್ದ ಮನೆಗಳ ಪರಿಹಾರ ನೀಡಲು ಆಧಾರ್ ಕಾರ್ಡ್ ಸೇರಿದಂತೆ ಹಲವು ಸಮಸ್ಯೆಗಳು ಇರುವುದರಿಂದಲೇ ಅಂತಹ ಮಾಹಿತಿಯನ್ನು ಸರ್ಕಾರವೇ ಪಟ್ಟಿ ಮಾಡಿ ಜಿಲ್ಲಾಡಳಿತಕ್ಕೆ ನೀಡಿತ್ತು. ಅದನ್ನೆಲ್ಲ ಈಗ ಸರಿಪಡಿಸಲಾಗಿದೆ. ಸಂತ್ರಸ್ತರಿಗೆ ಪರಿಹಾರದ ಹಣ ಜಮೆ ಆಗಲಿದೆ ಎಂದು ಹೇಳಿದರು.