ಬೆಳಗಾವಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ವಿಳಂಬ ಮಾಡುತ್ತಿರುವ ಸರ್ಕಾರದ ವರ್ತನೆ ಖಂಡಿಸಿ ಜೂನ್ 27 ರಂದು ಶಿಗ್ಗಾಂವಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಎದುರು ಧರಣಿ ನಡೆಸಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬಸವರಾಜ ಬೊಮ್ಮಾಯಿ ಸಿಎಂ ಆದ ಬಳಿಕ ಮೀಸಲಾತಿ ಕೊಡುತ್ತಾರೆ ಎಂಬ ಅತಿಯಾದ ನಂಬಿಕೆ, ವಿಶ್ವಾಸವಿತ್ತು. ಮೀಸಲಾತಿ ಸಂಬಂಧ ಮೂರು ಸಲ ಮಾತು ಕೊಟ್ಟು, ಸಿಎಂ ತಪ್ಪಿದ್ದಾರೆ. ಹೀಗಾಗಿ, ರಾಜ್ಯದ ಪಂಚಮಸಾಲಿ ಸಮಾಜದ 1 ಲಕ್ಷ ಜನರಿಂದ ಸಿಎಂ ನಿವಾಸದ ಎದುರು ಧರಣಿ ನಡೆಸಲು ನಿರ್ಧರಿಸಿದ್ದೇವೆ ಎಂದರು.
ಹುಸಿಯಾದ ಕೊಟ್ಟ ಮಾತು:ಈಗಾಗಲೇ ನಾವು ಸಮಾಜದ ವತಿಯಿಂದ ಸಿಎಂಗೆ ಬಹಿರಂಗ ಪತ್ರ ಬರೆದಿದ್ದೇವೆ. ಬಳಿಕ ಸಿಎಂ ನಮ್ಮ ಸಮಾಜದ ಸಚಿವರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದ ಜೊತೆಗೆ ಚರ್ಚಿಸಿದ್ದಾರೆ. ಧರಣಿ ನಡೆಸುತ್ತೇವೆ ಎಂದು ಹೇಳುತ್ತಿದ್ದಂತೆ ಸರ್ಕಾರದಲ್ಲಿ ಚಟುವಟಿಕೆಗಳು ನಡೆಯುತ್ತಿವೆ.
ಮೀಸಲಾತಿ ಕೊಡುತ್ತಾರೆ ಎಂದು ಈಗಲೂ ಸಿಎಂ ಬೊಮ್ಮಾಯಿ ಮೇಲೆ ನಂಬಿಕೆ, ವಿಶ್ವಾಸ ಇದೆ. ಇದಕ್ಕಾಗಿ ನಾವು ಆರಂಭಿಕ ಹಂತದಲ್ಲಿ ಸಿಎಂ ನಿವಾಸದ ಎದುರು ಹೋರಾಟ ನಡೆಸುತ್ತೇವೆ. ಬಳಿಕ ಪ್ರತಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಮಾಡುತ್ತೇವೆ. ಸಿಎಂ ಕೊಟ್ಟ ಭರವಸೆ ಹುಸಿಯಾದ ಕಾರಣಕ್ಕೆ ಪುನಃ ಪ್ರತಿಭಟನೆ ಮಾಡುತ್ತೇವೆ ಎಂದರು.
ಮನಸ್ಸು ಮಾಡಿದರೆ 24 ಗಂಟೆಯೊಳಗೆ ವರದಿ:ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸುವ ಅಧಿಕಾರ ಆಯೋಗಕ್ಕಿದೆ. ಆಯೋಗ ಸಮೀಕ್ಷೆ ನಡೆಸಲು ತಡ ಮಾಡುತ್ತಿರುವುದೇಕೆ? ಗೊತ್ತಾಗುತ್ತಿಲ್ಲ. ಸರ್ಕಾರ ಮನಸ್ಸು ಮಾಡಿದರೆ 24 ಗಂಟೆಯಲ್ಲಿ ವರದಿ ತರಿಸಿಕೊಳ್ಳಬಹುದು. ಸಮಾಜ ಬೆಳೆಯುತ್ತದೆ ಎಂಬ ಅಸೂಯೆ ಕೆಲವರಿಗೆ ಇರಬಹುದು, ಅದಕ್ಕೆ ತಡವಾಗ್ತಿದೆ. ನಮ್ಮದು ದೊಡ್ಡ ಸಮಾಜ, ಶೈಕ್ಷಣಿಕ, ಆರ್ಥಿಕ ಪ್ರಗತಿ ಆಗ್ತಾರೆ ಎಂಬ ಅಸೂಯೆ ಕೆಲವರಿಗೆ ಇದೆ.
ಈಗ ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದ ಸಮಾಜ ನಮ್ಮದು. ಅದಕ್ಕೆ ಮೀಸಲಾತಿಗೆ ಹೋರಾಟ ಮಾಡುತ್ತಿದ್ದೇವೆ. ಹೋರಾಟ ಹತ್ತಿಕ್ಕಲು ಸರ್ಕಾರ ಮುಂದಾಗುವುದಿಲ್ಲ ಎಂಬ ನಂಬಿಕೆ ನಮ್ಮದು. ಅರಮನೆ ಮೈದಾನದಲ್ಲಿ ನಡೆದ ಪ್ರತಿಭಟನೆ ವೇಳೆ ಸಮಾಜದ ಬಂಧುಗಳು ಬೆಳಗ್ಗೆಯೇ ಬಂದಿದ್ದರು. ಒಂದು ವೇಳೆ ನಮ್ಮ ಪ್ರತಿಭಟನೆ ಹತ್ತಿಕ್ಕಿದರೆ ಸಮಾಜ ಸರ್ಕಾರದ ವಿರುದ್ಧ ಸಿಟ್ಟಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ:ಪರಿಷತ್ ಚುನಾವಣೆಯಲ್ಲೂ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ: ಸಿಎಂ ಬೊಮ್ಮಾಯಿ ವಿಶ್ವಾಸ