ಬೆಳಗಾವಿ :ಈ ಸಾರಿಯ ಕೇಂದ್ರ ಬಜೆಟ್‌ನಲ್ಲಿ ತಾಳೆ ಎಣ್ಣೆ ದರ ಮೇಲೆ ಹಾಕಿರುವ ಬೆಲೆ ಏರಿಕೆಯಿಂದಾಗಿ ಹೋಟೆಲ್ ಉದ್ಯಮಿಗಳು ಮತ್ತು ಸಣ್ಣಪುಟ್ಟ ಬೀದಿಬದಿ ವ್ಯಾಪಾರ ನಡೆಸ್ತಿದ್ದವರಿಗೂ ಶಾಕ್ ನೀಡಿದೆ.
ಈಗಾಗಲೇ ಕೊರೊನಾದಿಂದ ಸಂಕಷ್ಟ ಎದುರಿಸುತ್ತಿರುವ ಹೋಟೆಲ್ ಉದ್ಯಮದ ಮೇಲೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ನಾಲ್ಕೈದು ತಿಂಗಳಿಂದಲೂ ತಾಳೆ ಎಣ್ಣೆ ದರ ಏರುತ್ತಿದೆ.
ಇದೀಗ ಈ ಎಣ್ಣೆ ಮೇಲೆ ಕೇಂದ್ರ ಸರ್ಕಾರ ಸೆಸ್ ವಿಧಿಸಿದ್ದರಿಂದಾಗಿ ದರ ಮತ್ತಷ್ಟು ಹೆಚ್ಚಳವಾಗಿದೆ. ಇದರಿಂದಾಗಿ ಎಲ್ಲಾ ಬಗೆಯ ಉಪಹಾರದ ಮೇಲೆ ದರವೂ ಏರಿಕೆಯಾಗಿದ್ದು, ಬಡ ಹಾಗೂ ಮಧ್ಯಮ ವರ್ಗದವರನ್ನು ಸಂಕಷ್ಟಕ್ಕೆ ದೂಡಿದೆ.
ವ್ಯಾಪಾರಕ್ಕೆ ಹೊಡೆತ :ತಾಳೆ ಎಣ್ಣೆ ಸೇರಿ ಇತರ ವಸ್ತುಗಳ ಬೆಲೆಯಲ್ಲೂ ಹೆಚ್ಚಳ ಕಂಡಿದೆ. ಲಾಕ್ಡೌನ್ ಸಡಿಲಿಕೆ ನಂತರ ಹೋಟೆಲ್ ಉದ್ಯಮದಲ್ಲಿ ತುಸು ಚೇತರಿಕೆ ಇತ್ತು. ಈಗ ಹೋಟೆಲ್ ಸಾಮಗ್ರಿಗಳ ದರ ಹೆಚ್ಚಳದಿಂದ ಊಟದಲ್ಲೂ ಬೆಲೆ ಏರಿಸುತ್ತಿರುವ ಕಾರಣ, ಗ್ರಾಹಕರು ಹೋಟೆಲ್ಗಳತ್ತ ಮುಖ ಮಾಡುತ್ತಿಲ್ಲ. ಇದರಿಂದ ವ್ಯಾಪಾರ ದಿಢೀರ್ ಕುಸಿತ ಕಂಡಿದೆ.