ಬೆಳಗಾವಿ:ಮಹಮಾರಿ ಕೊರೊನಾದ ಅಟ್ಟಹಾಸಕ್ಕೆ ಇಡೀ ದೇಶವೇ ನಲುಗುತ್ತಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆ ದೇಶದ ಹಲವು ನಗರಗಳಲ್ಲಿ ಆಕ್ಸಿಜನ್ ಅಭಾವ ಸೃಷ್ಟಿಯಾಗಿದೆ. ಆದರೆ, ಗಡಿ ಜಿಲ್ಲೆ ಬೆಳಗಾವಿ ಇದೀಗ ಆಕ್ಸಿಜನ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವತ್ತ ಹೆಜ್ಜೆ ಇರಿಸಿದೆ.
ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಜೀವರಕ್ಷಕವಾಗಿದೆ. ಆಕ್ಷಿಜನ್ ಸಿಗದಿದಕ್ಕೆ ಹಲವು ಸೋಂಕಿತರು ನಿತ್ಯ ಮೃತಪಡುತ್ತಿದ್ದಾರೆ. ಜಿಲ್ಲೆಯ ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಕೊರತೆ ಆಗಬಾರದು ಎಂದು ಯೋಜನೆ ರೂಪಿಸಿದ್ದ ಜಿಲ್ಲಾಡಳಿತ ಅದನ್ನು ಸಾಧಿಸಿದೆ. ಹೀಗಾಗಿ ಜಿಲ್ಲೆಯಲ್ಲೀಗ ಅಗತ್ಯಕ್ಕಿಂತ ಹೆಚ್ಚು ಆಕ್ಸಿಜನ್ ಉತ್ಪಾದನೆ ಮಾಡಲಾಗುತ್ತಿದೆ. ಗಡಿ ಜಿಲ್ಲೆ ಬೆಳಗಾವಿಯ ಎರಡು ಕಡೆ ಆಕ್ಸಿಜನ್ ಉತ್ಪಾದನಾ ಘಟಕ ಕಾರ್ಯಾರಂಭ ಮಾಡಿದ್ದು, ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ನೀಗಿಸಲು ಈ ಘಟಕಗಳು ಸಜ್ಜಾಗಿವೆ. ಜಿಲ್ಲೆಯ ನಿಪ್ಪಾಣಿ ಹಾಗೂ ಕಾಕತಿಯಲ್ಲಿ ಆಕ್ಸಿಜನ್ ಘಟಕಗಳು ಕಾರ್ಯಾರಂಭ ಮಾಡಿವೆ.
ಅವಲಂಬನೆಯಿಂದ ಸ್ವಾವಲಂಬನೆ:
ಭೌಗೋಳಿಕವಾಗಿ ಬೆಳಗಾವಿ ರಾಜ್ಯದಲ್ಲೇ ಅತಿ ದೊಡ್ಡ ಎರಡನೇ ಜಿಲ್ಲೆ. ಅಲ್ಲದೇ ಉತ್ತರ ಕರ್ನಾಟಕ ಭಾಗದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಜಿಲ್ಲೆ. ಮತ್ತೊಂದೆಡೆ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ಹೀಗೆ ಮೂರು ಜಿಲ್ಲೆಗಳ ಸಂಪರ್ಕ ಕೊಂಡಿಯಾಗಿದೆ. ಹೀಗಿದ್ದರೂ ಗಡಿ ಜಿಲ್ಲೆ ಬೆಳಗಾವಿಯು ಈವರೆಗೆ ಆಕ್ಸಿಜನ್‍ಗೆ ನೆರೆಯ ರಾಜ್ಯ, ಜಿಲ್ಲೆಗಳನ್ನೇ ಅವಲಂಬಿಸಿತ್ತು. ಬೆಳಗಾವಿಗೆ ಈವರೆಗೆ ಬಳ್ಳಾರಿ, ಬೆಂಗಳೂರು, ಪುಣೆ, ಮುಂಬೈ, ಧಾರವಾಡ ಹೀಗೆ ವಿವಿಧ ಕಡೆಯಿಂದ ಆಕ್ಸಿಜನ್ ಸರಬರಾಜು ಆಗುತ್ತಿತ್ತು. ಆದರೆ, ಇದೀಗ ಜಿಲ್ಲೆಯಲ್ಲಿ ಎರಡು ಆಕ್ಸಿಜನ್ ಉತ್ಪಾದನೆ ಘಟಕಗಳು ಕಾರ್ಯಾರಂಭ ಮಾಡಿದ್ದು, ಆಕ್ಸಿಜನ್‍ನಲ್ಲಿ ಉತ್ಪಾದನೆಯಲ್ಲಿ ಸ್ವಾವಲಂಬನೆಯಾಗಿದೆ. ಅಲ್ಲದೇ ಬೇರೆ ಜಿಲ್ಲೆ, ರಾಜ್ಯಕ್ಕೆ ಆಕ್ಸಿಜನ್ ಪೂರೈಕೆ ಮಾಡಲು ಘಟಕಗಳು ಸನ್ನದ್ಧವಾಗಿವೆ.