ಚಿಕ್ಕೋಡಿ:ಬೆಳಗಾವಿ ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೊಳಗಾಗಿರುವ ವಿವಿಧ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡವು ಭೇಟಿ ನೀಡಿ ನೈಜ ಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದರು.
ಬೆಳಗಾವಿ: ನೆರೆ ಹಾನಿ ಪ್ರದೇಶಕ್ಕೆ ಕೇಂದ್ರದ ಅಧಿಕಾರಿಗಳ ಭೇಟಿ, ಪರಿಶೀಲನೆ ಕೃಷ್ಣಾ, ದೂಧಗಂಗಾ, ವೇದಗಂಗಾ ಹಾಗೂ ಹಿರಣ್ಯಕೇಶಿ ನದಿಗಳ ಪ್ರವಾಹದಿಂದ ಉಂಟಾಗಿರುವ ನೆರೆ ಹಾನಿಯನ್ನು, ಹೈದರಾಬಾದ್ ನಲ್ಲಿರುವ ಕೃಷಿ ಇಲಾಖೆಯ ಎಣ್ಣೆಬೀಜಗಳ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ.ಮನೋಹರನ್ ಹಾಗೂ ಬೆಂಗಳೂರಿನ ಜಲಶಕ್ತಿ ಸಚಿವಾಲಯದ ಅಧೀಕ್ಷಕ ಎಂಜಿನಿಯರ್ ಗುರುಪ್ರಸಾದ್ ಜೆ. ಅವರು ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಸಂಚರಿಸಿ ಮಾಹಿತಿ ಕಲೆಹಾಕಿದರು.
ಮೊದಲಿಗೆ ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮಕ್ಕೆ ಭೇಟಿ ನೀಡಿದ ತಂಡ ಅತಿವೃಷ್ಟಿಯಿಂದಾದ ಸೋಯಾಬಿನ್ ಬೆಳೆ ಹಾನಿಯನ್ನು ಪರಿಶೀಲಿಸಿತು. ಈ ಸಂದರ್ಭದಲ್ಲಿ ಬಡಕುಂದ್ರಿ ಗ್ರಾಮದ ರೈತ 1.17 ಎಕರೆಯಲ್ಲಿ ಬೆಳೆದ ಸೋಯಾಬಿನ್ ಬೆಳೆ ಕಟಾವಿಗೆ ಬಂದಿತ್ತು. ಆದರೆ ಮಳೆಯಿಂದಾಗಿ ಸಂಪೂರ್ಣ ಹಾನಿಯಾಗಿದೆ. ಎಕರೆಗೆ 15 ಸಾವಿರ ಖರ್ಚು ಮಾಡಿದ್ದು, 15 ಕ್ವಿಂಟಲ್ ಬೆಳೆಯುವ ನಿರೀಕ್ಷೆಯಿತ್ತು. ಮಳೆಯಿಂದ ಇದೀಗ ಸಂಪೂರ್ಣ ಬೆಳೆ ನಾಶವಾಗಿದೆ ಎಂದು ರೈತನು ಅಧಿಕಾರಿಗಳ ಬಳಿ ಅಳಲು ತೋಡಿಕೊಂಡರು.
ಸೋಯಾಬಿನ್ ಬೆಳೆಯಲು ಬ್ಯಾಂಕಿನಿಂದ ಸಾಲ ಪಡೆಯಲಾಗಿದೆಯೇ ಎಂದು ತಂಡದ ಮುಖ್ಯಸ್ಥ ಮನೋಹರನ್ ರೈತನನ್ನು ಪ್ರಶ್ನಿಸಿದರು. ಇದಲ್ಲದೇ ಬೇರೆ ಬೆಳೆ ನಾಶವಾಗಿರುವ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ಪರಿಹಾರ ನೀಡುವಂತೆ ಮನವಿ:
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನಪರಿಷತ್ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ಕಟಾವಿಗೆ ಬಂದಿದ್ದ ಸೋಯಾಬಿನ್ ಬೆಳೆ ಸಂಪೂರ್ಣ ನಾಶವಾಗಿದೆ. ಪ್ರತಿವರ್ಷವೂ ಇದೇ ರೀತಿ ಬೆಳೆ ಹಾನಿಯಾಗುತ್ತಿದೆ ಎಂದು ಕೇಂದ್ರ ಅಧ್ಯಯನ ತಂಡಕ್ಕೆ ತಿಳಿಸಿದರು. ಅದೇ ರೀತಿ ಈ ಲಾಕ್‌ಡೌನ್ ನಿಂದ ರೈತರು ಬೆಳೆದ ಬೆಳೆಗಳೆಲ್ಲವೂ ಮಾರುಕಟ್ಟೆಗೆ ಸಾಗಿಸಲು ಅಸಾಧ್ಯವಾಗಿರುವುದರಿಂದ ರೈತರು ನಷ್ಟ ಅನುಭವಿಸಿದ್ದಾರೆ. ಈಗ ಮತ್ತೆ ನೆರೆ ಬಂದಿದ್ದರಿಂದ ಬೆಳೆದ ಸೋಯಾಬಿನ್, ಗೋವಿನ ಜೋಳ ಹೀಗೆ ಹಲವಾರು ಬೆಳೆಗಳು ನಷ್ಟವಾಗಿವೆ. ಹೀಗಾಗಿ ಸರಿಯಾದ ಪ್ರಮಾಣದಲ್ಲಿ ಪರಿಹಾರ ನೀಡಿ ಎಂದು ಕೇಂದ್ರದ ತಂಡಕ್ಕೆ ಮನವಿ ಮಾಡಿದರು.
ಪ್ರತಿ ವರ್ಷ ಬಿತ್ತನೆಗೆ 20 ರಿಂದ 30 ಸಾವಿರ ರೂ. ಖರ್ಚು ಆಗುತ್ತದೆ. ಆದರೆ ಸರ್ಕಾರ ನೀಡುತ್ತಿರುವುದು ಕೇವಲ ಎರಡು ಸಾವಿರ ರೂ. ಮಾತ್ರ. ಈಗಾಗಲೇ 200 ಎಕರೆ ಸೋಯಾಬಿನ್ ಬೆಳೆ ಹಾನಿಯಾಗಿದೆ. ಆದರೆ ಕೇಂದ್ರದ ತಂಡ ಹೇಳುತ್ತಿರುವುದು ಕೇವಲ 30 ಎಕರೆ. ಇದು ಕೇವಲ ಕಾಟಾಚಾರಕ್ಕೆ ಎಂಬಂತೆ ಬೆಳೆ ಹಾನಿ ಸಮೀಕ್ಷೆ ನಡೆಸುತ್ತಿದ್ದಾರೆ. ಇವರ ಪರಿಹಾರ ಹಣ ನಮ್ಮ ಉಳುಮೆಗೆ ಸಾಲುವುದಿಲ್ಲ ಎಂದು ರೈತರು ಅರೋಪಿಸುತ್ತಿದ್ದಾರೆ.
ಕಳೆದ ವರ್ಷದ ಪರಿಹಾರ ಹಣವೇ ರೈತರಿಗೆ ಇನ್ನೂ ತಲುಪಿಲ್ಲ. ಈಗ ಮತ್ತೆ ರೈತರ ಬೆಳೆ ಸಮೀಕ್ಷೆಗೆ ಕೇಂದ್ರ ತಂಡ ಬಂದಿದ್ದು, ಇದು ಕಾಟಾಚಾರದ ಸಮೀಕ್ಷೆ ಆಗದೆ ಸರಿಯಾದ ಪ್ರಮಾಣದಲ್ಲಿ ಸಮೀಕ್ಷೆ ಮಾಡಬೇಕೆಂದು ಹೀರಣ್ಯಕೇಶಿ ನದಿ ತೀರದ ಜನರು ಆಗ್ರಹಿಸಿದ್ದಾರೆ.