ಅಥಣಿ(ಬೆಳಗಾವಿ): ವಿಧಾನಪರಿಷತ್ ಚುನಾವಣೆಯಲ್ಲಿ(legislative council election) ಲಖನ್ ಜಾರಕಿಹೊಳಿ ಸ್ಪರ್ಧೆ ಮಾಡುತ್ತಾರೆ ಎಂಬುದನ್ನು ನಾನು ಪತ್ರಿಕೆಯಲ್ಲಿ ನೋಡಿದ್ದೇನೆ. ಜಾರಕಿಹೊಳಿ ಸ್ಪರ್ಧೆ ಬಗ್ಗೆ ಪಕ್ಷದಲ್ಲಿ ಯಾವುದೇ ಚರ್ಚೆ ಮುನ್ನೆಲೆಗೆ ಬಂದಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ(Former DCM Laxman Savadi) ಹೇಳಿದರು.
ಅಥಣಿ ಪಟ್ಟಣದಲ್ಲಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ವಿಧಾನಪರಿಷತ್ ಸದಸ್ಯರ ಚುನಾವಣೆ ಹಿನ್ನೆಲೆ ಬಿಜೆಪಿಯಿಂದ 20 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ನಿನ್ನೆ(ಶುಕ್ರವಾರ) ವರಿಷ್ಠರು ಬಿಡುಗಡೆ ಮಾಡಿದ್ದಾರೆ.
25 ಕ್ಷೇತ್ರದಲ್ಲಿ ಚುಣಾವಣೆ ನಡೆಯುತ್ತಿದೆ. ಬಿಜೆಪಿ ರಾಜ್ಯ ಕೋರ್ ಕಮಿಟಿಯಿಂದ 20 ಅಭ್ಯರ್ಥಿಗಳನ್ನು ಅಂತಿಮವಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆ ಪ್ರಕಾರ ಪಟ್ಟಿಯನ್ನು ಕೇಂದ್ರ ಬಿಡುಗಡೆ ಮಾಡಿದೆ. 5 ಜಿಲ್ಲೆಯಲ್ಲಿ ಇಬ್ಬರು ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತಿದೆ. ಆದರೆ ಒಂದೇ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳು ಸ್ಪರ್ಧಿಸಿದಾಗ ಒಬ್ಬರ ಆಯ್ಕೆ ನಮ್ಮ ಮುಂದಿದೆ ಎಂದರು.
ಬೆಳಗಾವಿ ಎರಡು ಕ್ಷೇತ್ರ, ವಿಜಯಪುರ- ಬಾಗಲಕೋಟೆ ಎರಡು ಕ್ಷೇತ್ರ, ಮೈಸೂರು- ಚಾಮರಾಜನಗರ ಎರಡು ಕ್ಷೇತ್ರ, ಚಿಕ್ಕಮಂಗಳೂರು-ಉಡುಪಿ ಎರಡು ಕ್ಷೇತ್ರ, ಧಾರವಾಡ- ಗದಗ ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಬದಲು ಆಯಾ ಕ್ಷೇತ್ರದಲ್ಲಿ ಒಬ್ಬರು ಸ್ಪರ್ಧಿಸಬೇಕೆಂಬ ಬಗ್ಗೆ ಅಂತಿಮವಾಗಿದೆ ಎಂದು ಸವದಿ ತಿಳಿಸಿದರು.