ಬೆಳಗಾವಿ:ದೇಶದ ಪ್ರವಾಹ ಪೀಡಿತ ಯಾವ ರಾಜ್ಯಕ್ಕೂ ಕೇಂದ್ರದಿಂದ ಪರಿಹಾರ ಬಿಡುಗಡೆ ಆಗಿಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.
ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಬೇರೆ ರಾಜ್ಯಕ್ಕೆ ಬಿಡುಗಡೆಯಾಗಿ, ಕರ್ನಾಟಕಕ್ಕೆ ಪರಿಹಾರ ಬಂದಿಲ್ಲ ಅಂದ್ರೆ ಬೇರೆ ಮಾತು. ಆದರೆ ಯಾವ ರಾಜ್ಯಕ್ಕೂ ಕೇಂದ್ರದ ಪರಿಹಾರ ಬಿಡುಗಡೆ ಆಗಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸದಲ್ಲಿದ್ದರು. ಹೀಗಾಗಿ ಪ್ರವಾಹ ಪರಿಹಾರ ಬಿಡುಗಡೆ ಕುರಿತು ಸಭೆ ಆಗಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವೈಮಾನಿಕ ಸಮೀಕ್ಷೆ ನಡೆಸಿ ಹೋಗಿದ್ದಾರೆ. ನಮ್ಮ ಅಧಿಕಾರಿಗಳು ಕೂಡ ಕೇಂದ್ರಕ್ಕೆ ಇಲ್ಲಿನ ವಾಸ್ತವ ಸ್ಥಿತಿಯನ್ನು ತಿಳಿಸಿದ್ದಾರೆ. ಎರಡು-ಮೂರು ದಿನಗಳಲ್ಲಿ ಪರಿಹಾರ ಬರುವ ನಿರೀಕ್ಷೆಯಲ್ಲಿದ್ದೇವೆ ಎಂದರು.
ಕಾಂಗ್ರೆಸ್ ಮತ್ತು ಜೆಡಿಎಸ್ನವರು ಪರಿಹಾರ ಬಿಡುಗಡೆ ಆಗಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಕೇಂದ್ರಕ್ಕೆ ನಿಯೋಗ ತೆಗೆದುಕೊಂಡು ಹೋಗಬೇಕಿತ್ತು. ಸಿಎಂ ಅವರಿಗೆ ತಾಕತ್ತಿಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಇದು ತಾಕತ್ತಿನ ಪ್ರಶ್ನೆ ಅಲ್ಲ. ಶಾಂತ ರೀತಿಯಿಂದ ಕೇಂದ್ರದಿಂದ ಅನುದಾನ ಪಡೆದುಕೊಳ್ಳಬೇಕಾಗಿದೆ. ಕೇಂದ್ರದಿಂದ ಹಣ ಬಿಡುಗಡೆ ಆಗಿಲ್ಲ ಎಂದು ನಾವೇನು ಕೈಕಟ್ಟಿ ಕುಳಿತುಕೊಂಡಿಲ್ಲ. ಈಗಾಗಲೇ ರಾಜ್ಯ ಸರ್ಕಾರ ಮೂರೂವರೆ ಸಾವಿರ ಕೋಟಿ ರೂ. ಪರಿಹಾರ ಕಾರ್ಯಕ್ಕೆ ಬಿಡುಗಡೆ ಮಾಡಿದೆ. ಇನ್ನೂ ಹೆಚ್ಚು ಹಣವನ್ನು ನಾವು ಬಿಡುಗಡೆ ಮಾಡುತ್ತೇವೆ. ಪುನರ್ವಸತಿ ಕಾರ್ಯ ಹಂತ ಹಂತವಾಗಿ ನಡೆದಿದೆ. ಈಗಾಗಲೇ ಮನೆ ಬಿದ್ದವರಿಗೆ, ಫೌಂಡೇಷನ್ ಹಾಕಿಕೊಳ್ಳುವರಿಗೆ ಒಂದು ಲಕ್ಷ ಹಣ ಬಿಡುಗಡೆ ಮಾಡಲಾಗಿದೆ. ಹತ್ತು ಸಾವಿರಗಳ ಚೆಕ್ಅನ್ನು ಬಹುತೇಕರಿಗೆ ಕೊಟ್ಟಾಗಿದೆ ಎಂದರು.
ಕಾಂಗ್ರೆಸ್ನವರು ಡರ್ಟಿ ಪಾಲಿಟಿಕ್ಸ್ ಮಾಡ್ತಿದ್ದಾರೆ ಎಂಬುವುದನ್ನು ನನ್ನ ಬಾಯಿಂದ ಹೇಳಲಾರೆ. ಪ್ರತಿಪಕ್ಷದವರು ಅವರ ಕೆಲಸ ಮಾಡುತ್ತಾರೆ. ಅದಕ್ಕೆ ನಾನು ವಿರೋಧ ಮಾಡುವುದಿಲ್ಲ. ಮೂರು ದಿನ ಅಧಿವೇಶನ ಕರೆದಿದ್ದೇವೆ. ಅಲ್ಲಿ ಚರ್ಚೆಯಾಗಲಿ. ಕೇಂದ್ರದಿಂದ ಹೆಚ್ಚು ಅನುದಾನ ತರಲು ಪ್ರಯತ್ನ ಮಾಡುತ್ತೇನೆ. ಬೆಳಗ್ಗೆ ರಾಜ್ಯಾಧ್ಯಕ್ಷರು ನಮ್ಮ ಮನೆಗೆ ಬಂದು ತಿಂಡಿ ತಿಂದು ಹೋಗಿದ್ದಾರೆ. ಮುಸುಕಿನ ಗುದ್ದಾಟ ನಡೆಯುತ್ತಿರುವುದು ಯಾವ ಪಕ್ಷದಲ್ಲಿ ಅಂತಾ ನಮ್ಮ ಬಾಯಿಂದ ಹೇಳಿಸಬೇಡಿ ಎಂದರು.
ಔರಾದ್ಕರ್ ವರದಿ ಜಾರಿಗೆಗೆ ಪ್ರಯತ್ನ ಮಾಡುತ್ತಿದ್ದೇವೆ. ಪೊಲೀಸ್ ಸಿಬ್ಬಂದಿಗೆ ಅನುಕೂಲ ಆಗಬೇಕು. ಸಾಧ್ಯವಾದರೆ ಮುಂದಿನ ಕ್ಯಾಬಿನೆಟ್ನಲ್ಲಿ ಅದಕ್ಕೆ ಒಂದು ರೂಪ ಕೊಡುತ್ತೇವೆ. ಅಕ್ಷರಶಃ ಔರಾದ್ಕರ್ ವರದಿ ಜಾರಿಗೆ ತರುವ ಪ್ರಯತ್ನ ಮಾಡುತ್ತೇವೆ ಎಂದರು.