ಬೆಳಗಾವಿ :ಭೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಹೊತ್ತಿರುವ ಸಚಿವ ಭೈರತಿ ಬಸವರಾಜ ಅವರನ್ನು ಕೂಡಲೇ ಸಂಪುಟದಿಂದ ಕೈ ಬಿಡುವಂತೆ ವಿಧಾನ ಪರಿಷತ್ ಕಾಂಗ್ರೆಸ್ ಮುಖ್ಯ ಸಚೇತಕ ಎಂ.ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ಪರಿಷತ್ ಕಾಂಗ್ರೆಸ್ ಸದಸ್ಯರಾದ ಬಿ ಕೆ ಹರಿಪ್ರಸಾದ್, ಪಿ ಆರ್ ರಮೇಶ್ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನ ಕೆಆರ್‌ಪುರಂ ವ್ಯಾಪ್ತಿಯಲ್ಲಿ ಅಣ್ಣಯ್ಯಪ್ಪ ಮತ್ತು ಇತರರಿಗೆ ಸೇರಿದ ಜಮೀನನ್ನು ನಕಲಿ ದಾಖಲೆ ಮಾಡಿ ಹಾಗೂ ನಕಲಿ ಮಾಲೀಕರನ್ನು ಸೃಷ್ಟಿಸಿ ಅವರಿಂದ ಕಚೇರಿಯಲ್ಲಿ ನೋಂದಾವಣೆ ಮಾಡಿಸಿರುವುದು ಮೇಲ್ನೋಟಕ್ಕೆ ಕಾನೂನು ಬಾಹಿರ ಎಂದು ತೀರ್ಮಾನಿಸಿ, ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಚಿವ ಭೈರತಿ ಬಸವರಾಜ ಹಾಗೂ ಮಾಜಿ ಸಚಿವ ಆರ್. ಶಂಕರ್ ಮತ್ತು ಇತರ ಮೂರು ಮಂದಿಯನ್ನು ಆರೋಪಿಗಳು ಎಂದು ತೀರ್ಮಾನಿಸಿ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ.
ಇಂಥದ್ದೊಂದು ಮಹತ್ವದ ತೀರ್ಪನ್ನು ಕೋರ್ಟ್ ನೀಡಿರುವ ಹಿನ್ನೆಲೆ ಸರ್ಕಾರ ಕೂಡಲೇ ಸಚಿವರನ್ನು ವಜಾಗೊಳಿಸಬೇಕು. ಸೂಕ್ತ ಕ್ರಮಕ್ಕೆ ಆಗ್ರಹಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ನಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಇಂದು ವಿಧಾನ ಪರಿಷತ್ನಲ್ಲಿ ನಿಲುವಳಿ ಸೂಚನೆ ಮಂಡಿಸಲು ತೀರ್ಮಾನಿಸಿದಾಗ, ಅದಕ್ಕೆ ಅವಕಾಶ ಸಿಕ್ಕಿಲ್ಲ.
ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಪಕ್ಷದ ಶಾಸಕಾಂಗ ನಾಯಕರಾದ ಸಿದ್ದರಾಮಯ್ಯ ಅವರ ಬಳಿ ಈ ವಿಚಾರ ಪ್ರಸ್ತಾಪಿಸಿದ್ದೇನೆ. ಮೊದಲು ವಿಧಾನ ಪರಿಷತ್ನಲ್ಲಿ ಈ ವಿಚಾರವನ್ನು ಮಂಡಿಸಿ, ಒಂದೊಮ್ಮೆ ಅಲ್ಲಿ ಚರ್ಚೆಗೆ ಅವಕಾಶ ಸಿಗದಿದ್ದರೆ ವಿಧಾನಸಭೆಯಲ್ಲಿ ಇದನ್ನು ಕೈಗೆತ್ತಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಈ ವಿಚಾರವನ್ನು ಒಂದು ತಾರ್ಕಿಕ ಅಂತ್ಯಕ್ಕೆ ತರುವವರೆಗೂ ಸುಮ್ಮನಿರುವುದಿಲ್ಲ. ಪಕ್ಷದ ನಾಯಕರ ಜತೆ ಚರ್ಚಿಸಿ ಒಂದು ಅಂತಿಮ ತೀರ್ಮಾನಕ್ಕೆ ಬರುತ್ತೇವೆ ಎಂದರು.