ಬೆಳಗಾವಿ:ಕುಂದಾನಗರಿಯಲ್ಲಿ 1,500 ರೂಪಾಯಿಗಾಗಿ ನೆತ್ತರು ಹರಿದಿದೆ.ಹಣದ ವಿಚಾರಕ್ಕೆ ಯುವಕರ ಗುಂಪೊಂದು ಡಾಬಾ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆ ಮಾಡಿರುವ ಘಟನೆ ಎಂ.ಕೆ. ಹುಬ್ಬಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಎಂ.ಕೆ.ಹುಬ್ಬಳ್ಳಿಯಲ್ಲಿ ಹಣದ ವಿಚಾರಕ್ಕೆ ಡಾಬಾ ಮಾಲೀಕನ ಕೊಲೆ ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿಯ ಪಂಚವಟಿ ಡಾಬಾ ಮಾಲೀಕ ಪ್ರಕಾಶ್ ನಾಗನೂರು (38) ಕೊಲೆಯಾದ ವ್ಯಕ್ತಿ. ಮಹಮ್ಮದ್ ಅಬ್ದುಲ್ ಅಜೀಜ್ ಬಡೇಗಾರ ಕೊಲೆ ಆರೋಪಿ.
ಘಟನೆ ಹಿನ್ನೆಲೆ:ಮೂಲತಃ ಬೈಲಹೊಂಗಲ ಪಟ್ಟಣದವರಾದ ಪ್ರಕಾಶ್, ಎಂ.ಕೆ. ಹುಬ್ಬಳ್ಳಿ ಗ್ರಾಮದಲ್ಲಿ ಪಂಚವಟಿ ಎಂಬ ಹೆಸರಿನ ಹೋಟೆಲ್ ನಡೆಸುತ್ತಿದ್ದರು. ಈತನ ಸ್ನೇಹಿತ ಮಂಜುನಾಥ್ ಶಿಂತ್ರಿ ಎಂಬುವವರು ಕೂಡ ಇದೇ ಗ್ರಾಮದಲ್ಲಿ ಹೂವಿನ ವ್ಯಾಪಾರ ನಡೆಸುತ್ತಿದ್ದರು. ಅದರಂತೆ ಮಂಜುನಾಥ್ ಶಿಂತ್ರಿ ಗ್ರಾಮದ ಮಹಮ್ಮದ್ ಅಬ್ದುಲ್ ಅಜೀಜ್ ಬಡೇಗಾರ ಎಂಬಾತನಿಗೆ 1,500 ರೂಗಳ ವಿವಿಧ ಬಗೆಯ ಹೂವುಗಳನ್ನು ಮಾರಾಟ ಮಾಡಿದ್ದು, ಹೂವು ಪಡೆದ ಮಹಮ್ಮದ್ ಅಬ್ದುಲ್ ಹಣ ನೀಡಲು ನಿರಾಕರಿಸಿದ್ದ.
ಈ ವಿಚಾರವನ್ನು ಮಂಜುನಾಥ್ ತನ್ನ ಸ್ನೇಹಿತ ಪ್ರಕಾಶ್ಗೆ ಈ ವಿಷಯ ತಿಳಿಸಿದ್ದರು. ಅದರಂತೆ ಭಾನುವಾರ ಮಹಮ್ಮದ್ ಅಬ್ದುಲ್ ಹಣ ನೀಡುವಂತೆ ಪ್ರಕಾಶ್ ಗದರಿಸಿದ್ದಾರೆ. ಇಷ್ಟಕ್ಕೆ ಕುಪಿತನಾದ ಆರೋಪಿ ಮೊಹಮ್ಮದ್, ಆತನ ಸ್ನೇಹಿತರನ್ನು ಕರೆದುಕೊಂಡು ಬಂದು ಪ್ರಕಾಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ತೀವ್ರ ಹಲ್ಲೆಗೆ ಒಳಗಾಗಿದ್ದ ಪ್ರಕಾಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಕಿತ್ತೂರು ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಹಲವು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.