ಬೆಳಗಾವಿ: ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ 5 ಬಾರಿ ಶಾಸಕರಾಗಿ, ಒಮ್ಮೆ ಎಂಎಲ್‍ಸಿಯಾಗಿ, ಎರಡು ಬಾರಿ ಸಚಿವ, ಒಮ್ಮೆ ಸಂಸದರಾಗಿದ್ದರು. ಹೀಗಾಗಿ ವಾಯುವ್ಯ ಕ್ಷೇತ್ರ ವ್ಯಾಪ್ತಿ ಹೊಂದಿರುವ ಬೆಳಗಾವಿ, ಬಾಗಲಕೋಟೆ, ವಿಜಯಪುರದಲ್ಲಿ ಹುಕ್ಕೇರಿ ರಾಜಕೀಯ ಹಿಡಿತ ಹೊಂದಿದ್ದಾರೆ. ಇನ್ನೂ ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ ಕೂಡ ಎರಡು ಬಾರಿ ಎಂಎಲ್‍ಸಿ ಆಗಿದ್ದಾರೆ. ಆರ್ಎಸ್ಎಸ್ ಬೆಂಬಲವೂ ಇವರಿಗಿದ್ದು, ಕಾರ್ಯಕರ್ತರು ಈಗಾಗಲೇ ಅಖಾಡಕ್ಕಿಳಿದಿದ್ದಾರೆ.
ಶಹಾಪುರಗೆ ವಿರೋಧಿ ಅಲೆ: ವಾಯವ್ಯ ಶಿಕ್ಷಕ ಕ್ಷೇತ್ರವ್ಯಾಪ್ತಿಯಲ್ಲಿ 36 ವಿಧಾನಸಭೆ ಕ್ಷೇತ್ರಗಳಿವೆ. ಮೂರು ಜಿಲ್ಲೆಗಳಲ್ಲಿ ಶಹಾಪುರಗೆ ವಿರೋಧಿ ಅಲೆಯಿದೆ. ಚುನಾವಣೆ ಸಮಯದಲ್ಲಿ ಮಾತ್ರ ಶಿಕ್ಷಕರ ಬಳಿ ಬರುವ ಇವರು, ನಂತರ ಶಿಕ್ಷಕರ ಸಮಸ್ಯೆಗಳನ್ನು ಆಲಿಸುವುದಿಲ್ಲವೆಂಬ ಆರೋಪಗಳಿವೆ. ಕೋವಿಡ್‍ನಿಂದ ಮೃತಪಟ್ಟ ಶಿಕ್ಷಕ ಕುಟುಂಬಗಳಿಗೆ ತಮ್ಮದೇ ಸರ್ಕಾರ ಇದ್ದರೂ ಪರಿಹಾರ ಕೊಡಿಸಲು ಶಹಾಪುರಗೆ ಸಾಧ್ಯವಾಗಿಲ್ಲ. ಮೃತ ಶಿಕ್ಷಕರ ಕುಟುಂಬಗಳಿಗೆ ಸಾಂತ್ವನ ಹೇಳಿಲ್ಲ. ಹೀಗಾಗಿ ಇಡೀ ಶಿಕ್ಷಕ ವಲಯವೇ ಇದೀಗ ಶಹಾಪುರ ವಿರುದ್ಧ ತಿರುಗಿ ಬಿದ್ದಿದೆ ಎನ್ನಲಾಗಿದೆ.
ಶಹಾಪುರಗೆ ವಿರೋಧಿ ಅಲೆ ಇರುವುದು ತಿಳಿಯುತ್ತಿದ್ದಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಬೆಳಗಾವಿಗೆ ಆಗಮಿಸಿ ಪ್ರಮುಖರ ಸಭೆ ನಡೆಸಿದರು. ಶಹಾಪುರ ಗೆಲುವಿಗೆ ತಂತ್ರ ರೂಪಿಸಿದರು. ಇನ್ನು ಪರಿಷತ್ ಸದಸ್ಯ ಪುಟ್ಟಣ್ಣ ಕೂಡ ಬೆಳಗಾವಿಯಲ್ಲೇ ಠಿಕಾಣಿ ಹೂಡಿದ್ದು, ಶಿಕ್ಷಕ ಸಂಘದ ಪದಾಧಿಕಾರಿಗಳ ಜೊತೆಗೆ ನಿರಂತರ ಸಭೆ ನಡೆಸುತ್ತಿದ್ದಾರೆ.