ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಅವರಿಂದು ನಾಮಪತ್ರ ಸಲ್ಲಿಸಿದ್ದಾರೆ. ಬೆಳಗಾವಿಯ ಡಿಸಿ ಕಚೇರಿಗೆ ಆಗಮಿಸಿದ ಅವರು ಚುನಾವಣೆ ಅಧಿಕಾರಿ ಆರ್. ವೆಂಕಟೇಶಕುಮಾರ್ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಮಾಜಿ ಸಚಿವ ಎ.ಬಿ.ಪಾಟೀಲ್, ಶಾಸಕಿಯರಾದ ಲಕ್ಷ್ಮಿ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ಮಾಜಿ ಶಾಸಕರಾದ ಅಶೋಕ ಪಟ್ಟಣ, ವೀರಕುಮಾರ ಪಾಟೀಲ, ಶ್ಯಾಮ ಘಾಟಗೆ ಉಪಸ್ಥಿತರಿದ್ದರು.
ಕಾಂಗ್ರೆಸ್, ಬಿಜೆಪಿ ಶಕ್ತಿ ಪ್ರದರ್ಶನ
ಪರಿಷತ್ ಚುನಾವಣೆಗಿಂದು ನಾಮಪತ್ರ ಸಲ್ಲಿಕೆಗೆ ಕೊನೆಯದಿನವಾಗಿದ್ದು, ಕುಂದಾನಗರಿಯಲ್ಲಿ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿದೆ. ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ, ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಹಾಗೂ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ನಾಮಪತ್ರ ಸಲ್ಲಿಸಲಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮುನ್ನವೇ ಬೃಹತ್ ಮೆರವಣಿಗೆ ನಡೆಸಿ ಶಕ್ತಿ ಪ್ರದರ್ಶನಕ್ಕೆ ಅಭ್ಯರ್ಥಿಗಳು ನಿರ್ಧರಿಸಿದ್ದಾರೆ. ತಮ್ಮ ಬೆಂಬಲಿಗರಿಗೆ ಬೆಳಗಾವಿಗೆ ಬರುವಂತೆ ಅಭ್ಯರ್ಥಿಗಳು ಕೋರಿದ್ದಾರೆ.
ಕೈ ಅಭ್ಯರ್ಥಿ ಟೆಂಪಲ್ ರನ್:
ನಾಮಪತ್ರ ಸಲ್ಲಿಕೆಗೂ ಮುನ್ನವೇ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಟೆಂಪಲ್ ರನ್ ನಡೆಸಿದ್ದಾರೆ. ಸಹೋದರಿಯೂ ಆಗಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿ ಕುಟುಂಬಸ್ಥರು ವಿವಿಧ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
ಬೆಳಗಾವಿ ತಾಲೂಕಿನ ಸುಳೆಬಾವಿ ಗ್ರಾಮ ದೇವತೆ ಮಹಾಲಕ್ಷ್ಮಿಗೆ ಚನ್ನರಾಜ್ ಕುಟುಂಬಸ್ಥರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಹಿಂಡಲಗಾ ಗಣಪತಿ ದೇಗುಲದಲ್ಲಿಯೂ ಚನ್ನರಾಜ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪೂಜೆ ಬಳಿಕ ಸಹೋದರ ಚನ್ನರಾಜ್ ಹಟ್ಟಿಹೊಳಿಯನ್ನು ಬೆಂಬಲಿಸುವಂತೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಪರಿಷತ್ ಚುನಾವಣೆ : ಬೆಳಗಾವಿ, ವಿಜಯಪುರದಲ್ಲಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ