ಬೆಳಗಾವಿ:ವಾಯುವ್ಯ ಶಿಕ್ಷಕರ, ಪದವೀಧರ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ವಿಶ್ವೇಶ್ವರಯ್ಯ ನಗರ ಮತಗಟ್ಟೆಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಭೇಟಿ ನೀಡಿದರು. ಈ ವೇಳೆ, ಬಿಸಿಲಿನಲ್ಲಿ ಸಾಲಿನಲ್ಲಿ ನಿಂತಿದ್ದನ್ನು ಗಮನಿಸಿದ ಡಿಸಿ, ಮತದಾರರಿಗೆ ಕುಳಿತುಕೊಳ್ಳಲು ಡೆಸ್ಕ್ ವ್ಯವಸ್ಥೆ ಮಾಡಿದರು. ವಿಶೇಷ ಎಂದರೆ ಸಿಬ್ಬಂದಿ ಜೊತೆ ಸೇರಿ ತಾವೇ ಕ್ಲಾಸ್ ರೂಂನಿಂದ ಡೆಸ್ಕ್ ತಂದು ಹಾಕಿ ಸರಳತೆ ಮೆರೆದರು. ಅಷ್ಟೇ ಅಲ್ಲ ವಿಶೇಷಚೇತನ ಮತದಾರನನ್ನು ತಾವೇ ಮತಗಟ್ಟೆಗೆ ಕರೆದೊಯ್ದರು.
ಶಾಸಕ ಅನಿಲ್ ಬೆನಕೆಯಿಂದ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಬಗ್ಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಪ್ರತಿಕ್ರಿಯಿಸಿ, ಮತದಾನ ಇಲ್ಲದವರು ಮತಗಟ್ಟೆಗೆ ಭೇಟಿ ನೀಡಲು ಅವಕಾಶ ಇಲ್ಲ. ಆದರೆ, ವಿಶ್ವೇಶ್ವರಯ್ಯ ಸರ್ಕಾರಿ ಶಾಲೆಯ ಮತಗಟ್ಟೆಗೆ ಅನಿಲ್ ಬೆನಕೆ ಭೇಟಿ ನೀಡಿರುವ ಮಾಹಿತಿ ಇದೆ. ಈ ಬಗ್ಗೆ ಮಾಹಿತಿ ನೀಡುವಂತೆ ಮತಗಟ್ಟೆ ಅಧಿಕಾರಿಗೆ ನಿರ್ದೇಶನ ನೀಡಿದ್ದೇನೆ. ಮತಗಟ್ಟೆಗೆ ಭೇಟಿ ನೀಡಿರುವ ವಿಡಿಯೋಗಳು ನಮ್ಮ ಬಳಿ ಇವೆ. ಹೀಗಾಗಿ ಲಿಖಿತ ದೂರು ನೀಡುವಂತೆ ಮತಗಟ್ಟೆ ಅಧಿಕಾರಿಗೆ ಸೂಚಿಸಿದ್ದೇನೆ. ಮತಗಟ್ಟೆ ಅಧಿಕಾರಿ ದೂರು ನೀಡಲಿದ್ದಾರೆ ಎಂದರು.