ಕರ್ನಾಟಕ

karnataka

ETV Bharat / city

ಗೆಲುವಿಗಿಂತಲೂ ಅಭ್ಯರ್ಥಿಗಳ ಹುಡುಕಾಟದ್ದೇ ಜೆಡಿಎಸ್​ಗೆ ದೊಡ್ಡ ಸವಾಲು: ಸಮರ್ಥರ ಹುಡುಕಾಟದಲ್ಲಿ ದಳಪತಿಗಳು! - mlc election activities

ವಿಧಾನಪರಿಷತ್‌ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಮೂರು ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಯಾರಿಗೆ ಟಿಕೆಟ್ ನೀಡಬೇಕೆಂಬ ಚರ್ಚೆಯಲ್ಲಿ ಆಯಾ ಪಕ್ಷದ​ ನಾಯಕರು ತೊಡಗಿದ್ದಾರೆ.

mlc election activities in JDS party
ಸಮರ್ಥರ ಹುಡುಕಾಟದಲ್ಲಿ ಜೆಡಿಎಸ್​

By

Published : Nov 10, 2021, 1:06 PM IST

ಬೆಂಗಳೂರು: ವಿಧಾನಪರಿಷತ್‌ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಮೂರು ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಯಾರಿಗೆ ಟಿಕೆಟ್ ನೀಡಬೇಕೆಂಬ ಚರ್ಚೆಯಲ್ಲಿ ಜೆಡಿಎಸ್ ತೊಡಗಿದೆ. ಗೆಲುವಿಗಿಂತಲೂ ಅಭ್ಯರ್ಥಿಗಳ ಹುಡುಕಾಟದ್ದೇ ಜೆಡಿಎಸ್​​ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಅಪ್ಪಾಜಿಗೌಡರಿಗೆ ಟಿಕೆಟ್ ನೀಡುವ ಸಾಧ್ಯತೆ:

ಜೆಡಿಎಸ್ ಪಕ್ಷದಲ್ಲಿ ಜನವರಿ 5ಕ್ಕೆ ಪರಿಷತ್ ಸದಸ್ಯರಾದ ಎನ್. ಅಪ್ಪಾಜಿ ಗೌಡ (ಮಂಡ್ಯ), ಸಂದೇಶ ನಾಗರಾಜ್ (ಮೈಸೂರು), ಸಿ.ಆರ್. ಮನೋಹರ್ (ಕೋಲಾರ), ಕಾಂತರಾಜು (ತುಮಕೂರು) ಈ ನಾಲ್ವರ ಅವಧಿ ಮುಗಿಯಲಿದೆ. ಈ ನಾಲ್ವರ ಪೈಕಿ ಮೂವರು ಈಗಾಗಲೇ ಅನ್ಯ ಪಕ್ಷದತ್ತ ಮುಖಮಾಡಿದ್ದಾರೆ. ಸಂದೇಶ ನಾಗರಾಜ್ ಮತ್ತು ಸಿ.ಆರ್. ಮನೋಹರ್ ಅವರು ಬಿಜೆಪಿಗೆ ಹೋಗುವ ಸಾಧ್ಯತೆ ಇದ್ದು, ಕಾಂತರಾಜು ಕಾಂಗ್ರೆಸ್‌ಗೆ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದೆ. ಅಪ್ಪಾಜಿಗೌಡ ಮಾತ್ರ ಜೆಡಿಎಸ್‌ನಲ್ಲಿ ಇರುವುದರಿಂದ ಮಂಡ್ಯ ಸ್ಥಳೀಯ ಸಂಸ್ಥೆಯಿಂದ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ.

ಸಮರ್ಥ ಅಭ್ಯರ್ಥಿ:

ಕೆಲ ಪರಿಷತ್ ಸದಸ್ಯರು ಪಕ್ಷ ತ್ಯಜಿಸುತ್ತಿರುವ ಕಾರಣ ದಳಪತಿಗಳಿಗೆ ತಲೆನೋವಾಗಿದೆ. ಪಡೆದುಕೊಳ್ಳುವುದಕ್ಕಿಂತಲೂ ಕಳೆದುಕೊಳ್ಳುವ ಆತಂಕ ಜೆಡಿಎಸ್​ಗೆ ಎದುರಾಗಿದೆ. ಈಗಾಗಲೇ ಸಿಂದಗಿ, ಶಿರಾ ಕ್ಷೇತ್ರಗಳನ್ನು ಕಳೆದುಕೊಂಡಿರುವ ಜೆಡಿಎಸ್‍ ಮುಂದೆ ಎಚ್ಚರಿಕೆಯ ಹೆಜ್ಜೆ ಇಡಲು ನಿರ್ಧರಿಸಿದೆ. ಕಾಂಗ್ರೆಸ್, ಬಿಜೆಪಿಗೆ ಸಮಬಲದ ಪೈಪೋಟಿ ನೀಡಬೇಕಾದರೆ ಸಮರ್ಥ ಅಭ್ಯರ್ಥಿ ಅತ್ಯಗತ್ಯ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.

ಹೆಚ್​​ಡಿಕೆ ಸಮಾಲೋಚನೆ:

ತುಮಕೂರಿನಲ್ಲಿ ಕಾಂತರಾಜು ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿರುವುದರಿಂದ ಅಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬುದರ ಕುರಿತು ಸ್ಥಳೀಯ ಮುಖಂಡರೊಂದಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಮಾಲೋಚನೆ ನಡೆಸಿದ್ದಾರೆ. ಕೋಲಾರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎಂಬುದರ ಬಗ್ಗೆ ಸ್ಥಳೀಯ ಮುಖಂಡರ ಜೊತೆ ಚರ್ಚೆ ನಡೆಸಿ ಅಂತಿಮಗೊಳಿಸಲಿದ್ದಾರೆ. ಜೆಡಿಎಸ್ ತೊರೆದು ಇತರೆ ಪಕ್ಷದತ್ತ ನಾಯಕರು ಮುಖ ಮಾಡುತ್ತಿರುವುದರಿಂದ ಚುನಾವಣೆಯಲ್ಲಿ ಜೆಡಿಎಸ್‌ಗೆ ಪೆಟ್ಟು ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಪಕ್ಷ ತೊರೆದು ಹೋಗುತ್ತಿರುವ ಸದಸ್ಯರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಪ್ರತಿಸ್ಪರ್ಧಿಯಾಗಿ ಸ್ಥಳೀಯ ಮಟ್ಟದಲ್ಲಿ ಉತ್ತಮ ಬಾಂಧವ್ಯ ಹೊಂದಿರುವವರಿಗೆ, ಸಮರ್ಥ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ದಳಪತಿಗಳು ರಾಜಕೀಯ ತಂತ್ರಗಾರಿಕೆ ರೂಪಿಸುವಲ್ಲಿ ತೊಡಗಿದ್ದಾರೆ. ಬಿಡದಿಯ ತಮ್ಮ ತೋಟದ ಮನೆಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ಮಂಗಳವಾರ ಸಂಜೆ ತುಮಕೂರು ಜಿಲ್ಲೆಯ ಮುಖಂಡರ ಜೊತೆಗೆ ಎರಡು ಗಂಟೆಗೂ ಹೆಚ್ಚು ಕಾಲ ಸಮಾಲೋಚನೆ ನಡೆಸಿದ್ದಾರೆ.

ಇದನ್ನೂ ಓದಿ:ಶಿವಮೊಗ್ಗದಲ್ಲಿ ಚಲಿಸುವ ರೈಲಿನಿಂದ ಇಳಿಯುವಾಗ ಬಿದ್ದ ಮಹಿಳೆ.. ಸಮಯಪ್ರಜ್ಞೆಯಿಂದ ಜೀವ ಉಳಿಸಿದ ರೈಲ್ವೆ ಪೊಲೀಸ್​

ಸಿ.ಆರ್. ಮನೋಹರ್, ಕಾಂತರಾಜು, ಸಂದೇಶ ನಾಗರಾಜ್ ಅವರು ಪಕ್ಷದಿಂದ ಸವಲತ್ತುಗಳನ್ನು ಪಡೆದುಕೊಂಡು ರಾಜಕೀಯವಾಗಿ ನೆಲೆ ಕಂಡುಕೊಂಡ ಬಳಿಕ ಇತರೆ ಪಕ್ಷಕ್ಕೆ ವಲಸೆ ಹೋಗುತ್ತಿರುವುದು ಜೆಡಿಎಸ್ ವರಿಷ್ಠರಿಗೆ ಪಕ್ಷವನ್ನು ಭದ್ರಗೊಳಿಸಲು ಹಿನ್ನಡೆಯಾಗುತ್ತಿದೆ. ಹೀಗಾಗಿ ಅವರಿಗೆ ಚುನಾವಣೆಯಲ್ಲಿ ಸಮರ್ಥ ಪ್ರತಿಸ್ಪರ್ಧಿಗಳನ್ನು ಹಾಕುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ.

ABOUT THE AUTHOR

...view details