ಬೆಳಗಾವಿ:ಮಹಾನಗರ ಪಾಲಿಕೆ ಚುನಾವಣೆ ಬಳಿಕ ಗಡಿ ಜಿಲ್ಲೆ ಬೆಳಗಾವಿ ಇದೀಗ ಪರಿಷತ್ ಚುನಾವಣೆ(Council election)ಗೆ ಸಿದ್ಧಗೊಳ್ಳುತ್ತಿದೆ. ಪಾಲಿಕೆಯ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಸ್ಥಳೀಯ ನಾಯಕರು ಪರಿಷತ್ನ ಒಂದು ಸ್ಥಾನದಲ್ಲಾದರೂ ಗೆಲ್ಲಲು ತಂತ್ರ ರೂಪಿಸುತ್ತಿದ್ದಾರೆ.
ಆಕಾಂಕ್ಷಿಗಳ ಹೆಚ್ಚಳದಿಂದ ಕಾಂಗ್ರೆಸ್ ಪಾಳಯಕ್ಕೆ ಬಂಡಾಯ ಭೀತಿ ಎದುರಾಗುವ ಸಾಧ್ಯತೆ ಇದೆ. ಟಿಕೆಟ್ ವಂಚಿತರನ್ನು ಮನವೊಲಿಸುವುದು ಸ್ಥಳೀಯ ನಾಯಕರಿಗೆ ದೊಡ್ಡ ಸವಾಲಾಗಲಿದೆ. ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ, ಮಾಜಿ ಸಚಿವ ವೀರಕುಮಾರ್ ಪಾಟೀಲ, ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ ಸೇರಿ ಜಿಲ್ಲೆಯಿಂದ 7 ಜನ ನಾಯಕರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಹಿರಿತನದ ಆಧಾರದ ಮೇಲೆ ನನಗೆ ಟಿಕೆಟ್ ನೀಡುವಂತೆ ಪ್ರಕಾಶ್ ಹುಕ್ಕೇರಿ ಹಾಗೂ ವೀರಕುಮಾರ್ ಪಾಟೀಲ್ ರಾಜ್ಯ ಕಾಂಗ್ರೆಸ್ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ.
ಈ ಬಾರಿ ಯುವಕರಿಗೆ ಟಿಕೆಟ್ ನೀಡಬೇಕು ಎಂಬ ಮಾತು ಕೇಳಿಬಂದ ಹಿನ್ನೆಲೆಯಲ್ಲಿ ಚನ್ನರಾಜ್ ಹಟ್ಟಿಹೊಳಿ ಅವರಿಗೆ ಟಿಕೆಟ್ ನೀಡಬೇಕೆಂಬ ಆಗ್ರಹ ಇದೆ. ಇನ್ನುಳಿದಂತೆ ಸುನೀಲ್ ಹನಮಣ್ಣವರ್, ಕಿರಣ್ ಸಾಧುನವರ್, ಶಹಾಜಾನ್ ಡೊಂಗರಗಾಂವ್ ಹಾಗೂ ಡಾ.ಎನ್.ಎ. ಮಗದುಮ್ಮ ಟಿಕೆಟ್ ಕೇಳಿದ್ದಾರೆ. ಇವರೆಲ್ಲರ ಹೆಸರನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಕೆಪಿಸಿಸಿಗೆ ರವಾನಿಸಿದೆ.
ಇದನ್ನೂ ಓದಿ: ನಮ್ಮ ಕುಟುಂಬದಿಂದ ಎಂಎಲ್ಸಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಜಿ.ಟಿ.ದೇವೇಗೌಡ ಸ್ಪಷ್ಟನೆ
ಸಿಎಲ್‍ಪಿ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಯಾರಿಗೆ ಬೆಳಗಾವಿ ಮೇಲ್ಮನೆ ಟಿಕೆಟ್ ನೀಡಬೇಕು ಎಂದು ನಿರ್ಧರಿಸಲಿದ್ದಾರೆ. ಎರಡ್ಮೂರು ದಿನಗಳಲ್ಲಿ ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಯಲಿದ್ದು, ಟಿಕೆಟ್ ಹಂಚಿಕೆಯ ನಿರ್ಧಾರ ಪ್ರಕಟಿಸಲಿದ್ದಾರೆ.
ಸತೀಶ್ ಆಪ್ತನಿಗೋ? ಹೆಬ್ಬಾಳ್ಕರ್ ತಮ್ಮನಿಗೋ?
ಜಿಲ್ಲೆಯಿಂದ ಸ್ಥಳೀಯ ಸಂಸ್ಥೆಗಳ ಮೂಲಕ ಇಬ್ಬರು ಮೇಲ್ಮನೆ ಪ್ರವೇಶಿಸಲಿದ್ದಾರೆ. ವಿಶೇಷ ಅಂದರೆ ಎರಡೂ ಸ್ಥಾನಗಳಿಗೆ ಬಿಜೆಪಿ ಆಗಲಿ, ಕಾಂಗ್ರೆಸ್ ಆಗಲಿ ಸ್ಪರ್ಧಿಸುವುದಿಲ್ಲ. ಒಂದು ಸ್ಥಾನಕ್ಕೆ ಅಭ್ಯರ್ಥಿಯನ್ನು ಉಭಯ ಪಕ್ಷಗಳು ಕಣಕ್ಕಿಳಿಸುತ್ತವೆ. ಕಾಂಗ್ರೆಸ್‍ನಲ್ಲಿ ಇದೀಗ ಟಿಕೆಟ್‍ಗಾಗಿ ಪೈಪೋಟಿ ತೀವ್ರಗೊಂಡಿದೆ.
ಸತೀಶ್ ಜಾರಕಿಹೊಳಿ ಆಪ್ತ ವೀರಕುಮಾರ್ ಪಾಟೀಲ ಟಿಕೆಟ್‍ಗಾಗಿ ಶತಪ್ರಯತ್ನ ನಡೆಸುತ್ತಿದ್ದಾರೆ. ಮತ್ತೊಂದೆಡೆ ರಾಜ್ಯ ನಾಯಕರ ಜೊತೆಗೆ ಹೈಕಮಾಂಡ್ ಮಟ್ಟದಲ್ಲಿಯೂ ಹಿಡಿತ ಹೊಂದಿರುವ ಪ್ರಕಾಶ್ ಹುಕ್ಕೇರಿ ಕೂಡ ಟಿಕೆಟ್‍ಗಾಗಿ ಪ್ರಯತ್ನಿಸುತ್ತಿದ್ದಾರೆ. ತಮ್ಮನನ್ನು ಮೇಲ್ಮನೆಗೆ ಕಳಿಸಲೇಬೇಕು ಎಂದು ನಿರ್ಧರಿಸಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಟಿಕೆಟ್‍ಗಾಗಿ ದೆಹಲಿ ದಂಡಯಾತ್ರೆ ಕೈಗೊಂಡಿದ್ದಾರೆ. ರಾಹುಲ್ ಗಾಂಧಿ ಸೇರಿದಂತೆ ಅನೇಕ ನಾಯಕರನ್ನು ಭೇಟಿ ಮಾಡಿ ಟಿಕೆಟ್ ನೀಡುವಂತೆ ಕೋರುತ್ತಿದ್ದಾರೆ. ಇತ್ತ ಇವರ ಸಹೋದರ ಚನ್ನರಾಜ್ ಕೂಡ ಕಳೆದ 6 ತಿಂಗಳಿಂದ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಎಲ್ಲ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಬೆಂಬಲಿಸುವಂತೆ ಕೋರಿದ್ದಾರೆ.
ಹಾಲಿ ಸದಸ್ಯರಿಗೆ ಬಿಜೆಪಿ ಮಣೆ
ಇತ್ತ ಆಡಳಿತಾರೂಢ ಬಿಜೆಪಿ ಹಾಲಿ ಸದಸ್ಯ ಮಹಾಂತೇಶ ಕವಟಗಿಮಠ ಅವರನ್ನು ಕಣಕ್ಕೆ ಇಳಿಸುವುದು ಬಹುತೇಕ ಖಚಿತವಾಗಿದೆ. ಲಕ್ಷ್ಮಣ ಸವದಿ, ಪ್ರಭಾಕರ ಕೋರೆ, ಜೊಲ್ಲೆ ದಂಪತಿ ಕವಟಗಿಮಠ ಬೆನ್ನಿಗಿದ್ದಾರೆ. ಮತ್ತೊಂದೆಡೆ ಪಕ್ಷೇತರ ಎಂಎಲ್‍ಸಿ ವಿವೇಕರಾವ್ ಪಾಟೀಲ ಈ ಸಲ ಸ್ಪರ್ಧಿಸುವುದು ಕೂಡ ಖಚಿತವಾಗಿದೆ. ಕಳೆದ ಸಲ ಪಕ್ಷೇತರವಾಗಿ ಕಣಕ್ಕಿಳಿದಿದ್ದ ಅವರು ಈ ಸಲ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಮತ್ತೊಮ್ಮೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
ಈ ಮಧ್ಯೆ ಬಿಜೆಪಿಯಲ್ಲಿರುವ ಜಾರಕಿಹೊಳಿ ಸಹೋದರರು ಪರಿಷತ್ ಚುನಾವಣೆಗೆ ನಿಗೂಢ ನಡೆ ಅನುಸರಿಸುತ್ತಿದ್ದಾರೆ. ಸಹೋದರ ಲಖನ್ ಜಾರಕಿಹೊಳಿ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಎರಡ್ಮೂರು ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ಮಾಹಿತಿ ಹೊರಬೀಳಲಿದೆ.