ಅಥಣಿ :ವ್ಯಾಪಾರಸ್ಥರ ಅಸಮಾಧಾನ ಹಿನ್ನೆಲೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಪೂರ್ವ ನಿಗದಿತ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸದೇ ಹಿಂದಿರುಗಿರುವ ಘಟನೆ ನಡೆದಿದೆ.
ಕಾಮಗಾರಿ ಭೂಮಿಪೂಜೆ ಮೊಟಕುಗೊಳಿಸಿದ ಶಾಸಕ ಮಹೇಶ್ ಕುಮಟಳ್ಳಿ ಪಟ್ಟಣದ ಬೆಣ್ಣೆಪೇಟೆಯಲ್ಲಿ ಸುಮಾರು 53 ಲಕ್ಷ ವೆಚ್ಚದಲ್ಲಿ ವಾಣಿಜ್ಯ ಮಳಿಗೆ ಭೂಮಿ ಪೂಜೆ ನೆರವೇರಿಸಲು ಅಧಿಕಾರಿಗಳು ಸಮಯವನ್ನು ಪೂರ್ವ ನಿಗದಿ ಪಡಿಸಿದ್ದರು. ಶಾಸಕ ಮಹೇಶ್ ಕಾಮಗಾರಿಗೆ ಮುಂದಾಗುತ್ತಿದ್ದಂತೆ, ವ್ಯಾಪಾರಸ್ಥರು ಒಟ್ಟಾಗಿ ಶಾಸಕರ ಮುಂದೆ ಈ ಕಾಮಗಾರಿ ವಿರೋಧಿಸಿದರು.
ಅಲ್ಲದೇ ಈ ಯೋಜನೆಯಿಂದಾಗುವ ಅನಾನುಕೂಲದ ಬಗ್ಗೆ ತಿಳಿಸಿ ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳೀಯರ ಅಹವಾಲನ್ನು ಶಾಂತವಾಗಿ ಆಲಿಸಿದ ಶಾಸಕ ಮಹೇಶ್ ಕುಮಟಳ್ಳಿ, ಕಾಮಗಾರಿಯ ಭೂಮಿ ಪೂಜೆ ಮೊಟಕುಗೊಳಿಸಿದರು.
ನಂತರ ಶಾಸಕ ಕುಮಟಳ್ಳಿ ಮಾತನಾಡಿ, ಪುರಸಭೆ ವ್ಯಾಪ್ತಿಯ ಖಾಲಿ ಸ್ಥಳದಲ್ಲಿ ವ್ಯಾಪಾರಸ್ಥರಿಗೆ ಅನುಕೂಲವಾಗಲಿ ಎಂದು ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ರೂಪುರೇಷೆ ಸಿದ್ಧಪಡಿಸಲಾಗಿತ್ತು. ಆದರೆ, ಸ್ಥಳೀಯ ವ್ಯಾಪಾರಸ್ಥರು ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕಾಮಗಾರಿಯಿಂದ ಅವರ ವ್ಯಾಪಾರಕ್ಕೆ ತೊಂದರೆ ಆಗುವುದರಿಂದ ಈ ಕಾಮಗಾರಿಯ ರೂಪುರೇಷೆಯನ್ನು ಬದಲಾಯಿಸುತ್ತಿದ್ದೇವೆ. ಇದೇ ಜಾಗದಲ್ಲಿ ಅವರು ಅಂದುಕೊಂಡಂತೆ ವ್ಯಾಪಾರ ಕಟ್ಟಡ ನಿರ್ಮಾಣ ಮಾಡಲಾಗುವುದೆಂದು ಭರವಸೆ ನೀಡಿದರು.