ಬೆಳಗಾವಿ: ಉಪಚುನಾವಣೆಯಲ್ಲಿ ಗೆದ್ದರೆ ಮಂತ್ರಿ ಮಾಡುವುದಾಗಿ ನಮ್ಮ ವರಿಷ್ಠರೇ ಹೇಳಿದ್ದರು. ಆದರೆ ನನ್ನನ್ನು ಏಕೆ ಪರಿಗಣಿಸಿಲ್ಲ ಎಂಬುದು ತಿಳಿಯುತ್ತಿಲ್ಲ ಎಂದು ಶಾಸಕ ಮಹೇಶ್ ಕುಮಟಳ್ಳಿ ಬೇಸರ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಹೇಶ್ ಕುಮಟಳ್ಳಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೀವು ಗೆಲ್ಲಿಸುತ್ತಿರುವುದು ಶಾಸಕನಲ್ಲ, ಭವಿಷ್ಯದ ಮಂತ್ರಿಯನ್ನು ಎಂದು ಸಿಎಂ ಅವರು ಉಪಚುನಾವಣೆಯಲ್ಲಿ ಕ್ಷೇತ್ರದ ಜನತೆಗೆ ಭರವಸೆ ನೀಡಿದ್ದರು. ಚುನಾವಣೆಯಲ್ಲಿ ಗೆದ್ದ ಮೇಲೆ ನಾನೂ ಮಂತ್ರಿ ಆಗುತ್ತೇನೆ ಎಂಬ ವಿಶ್ವಾಸದಲ್ಲಿದ್ದೆ. ಆಮೇಲೆ ನಡೆದ ರಾಜಕೀಯ ವಿದ್ಯಮಾನಗಳಲ್ಲಿ ನನ್ನನ್ನು ಮಂತ್ರಿ ಸ್ಥಾನದಿಂದ ಕೈಬಿಟ್ಟಿದ್ದಾರೆ ಎಂದರು.
ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದು, ಸಿಎಂ ಹಾಗೂ ಪಕ್ಷಕ್ಕೆ ಮುಜುಗರ ಆಗುವ ರೀತಿ ವರ್ತಿಸುವುದಿಲ್ಲ. ಎಂಎಲ್‌ಎ ಆಗಿ ಜನಸೇವೆ ಮಾಡುತ್ತಿದ್ದೇನೆ. ಮಂತ್ರಿ ಮಾಡಿದ್ರೆ ಜವಾಬ್ದಾರಿಯುತವಾಗಿ ನಿಭಾಯಿಸುತ್ತೇನೆ. 12 ಜನ ಗೆದ್ದವರ ಪೈಕಿ 11 ಜನರನ್ನು ಮಂತ್ರಿ ಮಾಡಿದ್ದಾರೆ. ಆದ್ರೆ ನನ್ನನ್ನೇಕೆ ಕೈಬಿಟ್ಟರು ಅನ್ನೋದು ತಿಳಿಯುತ್ತಿಲ್ಲ. ಪಕ್ಷ ಕಟ್ಟುವುದು ಕಷ್ಟವಿದ್ದು, ನಾನು ಪಕ್ಷಕ್ಕೆ ಯಾವುದೇ ರೀತಿಯ ಹಾನಿ ಮಾಡುವುದಿಲ್ಲ. ಬೆಳಗಾವಿಯಲ್ಲಿ ಅಸಮಾಧಾನಿತರು ಅಮಿತ್ ಶಾ ಭೇಟಿಗೆ ನಿರ್ಧರಿಸಿದ್ರೆ ಅವರ ಜೊತೆಗೆ ನಾನೂ ಹೋಗುತ್ತೇನೆ ಎಂದರು.
ಬೆಳಗಾವಿ, ಬೆಂಗಳೂರಿಗೆ ಮಾತ್ರ ಸರ್ಕಾರ ಸೀಮಿತವಾಗಿದೆ ಎಂಬ ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಟಳ್ಳಿ ರೇಣುಕಾಚಾರ್ಯ ಮಾತನಾಡಿದ್ದು ಸರಿಯಾಗಿದೆ. ಅದರಲ್ಲಿ ತಪ್ಪೇನೂ ಇಲ್ಲ ಎಂದರು.