ಅಥಣಿ :ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಚಿಕ್ಕ ಚಿಕ್ಕ ಮಕ್ಕಳು ಭಿಕ್ಷಾಟನೆ ನಡೆಸುತ್ತಿದ್ದರೂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಅಥಣಿ ಪಟ್ಟಣದಲ್ಲಿ ಮಕ್ಕಳಿಂದ ಭಿಕ್ಷಾಟನೆ ಕುರಿತಂತೆ ಹೀಗಿದೆ ಅಧಿಕಾರಿಗಳ ಪ್ರತಿಕ್ರಿಯೆ.. ಪಟ್ಟಣದ ವಿವಿಧ ಹೋಟೆಲ್, ದೇವಸ್ಥಾನ, ಬಸ್ ನಿಲ್ದಾಣ, ಆಸ್ಪತ್ರೆಯ ಮುಂಭಾಗ ಮಕ್ಕಳು ಭಿಕ್ಷಾಟನೆ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಅದರೊಂದಿಗೆ ಎಳೆಯ ಕಂದಮ್ಮಗಳನ್ನು ಕರೆದುಕೊಂಡು ವೃದ್ಧರೂ ಭಿಕ್ಷಾಟನೆಯಲ್ಲಿ ನಿರತರಾಗಿದ್ದಾರೆ.
ಬಾಡಿಗೆ ಮಕ್ಕಳನ್ನು ಕರೆದುಕೊಂಡು ಭಿಕ್ಷಾಟನೆ ಮಾಡುತ್ತಾರೆ ಎಂಬ ಮಾತು ಕೂಡ ಕೇಳಿ ಬರುತ್ತಿವೆ. ಸರ್ಕಾರ ನಿರ್ಗತಿಕರಿಗೆ ಹಲವಾರು ಯೋಜನೆಗಳನ್ನು ರೂಪಿಸಿದರೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ವಂಚಿತರಾಗುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಭಿಕ್ಷಾಟನೆಗೆ ತೊಡಗಿಕೊಂಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಹಲವಾರು ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಒಳಗಾಗಿ ನಿರ್ಗತಿಕರು ಇನ್ನು ಪರದಾಡುವಂತಾಗಿದೆ ಎಂದು ಪ್ರಜ್ಞಾವಂತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಷಯಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಅಶೋಕ ಕಾಂಬಳೆ ಮಾತನಾಡಿ, ಈಗಾಗಲೇ ನಾವು ಅವರನ್ನು ಮನವೊಲಿಸಿವ ಪ್ರಯತ್ನ ಮಾಡಿದ್ದೇವೆ. ಆದರೆ, ನಮಗೆ ಸಕಾರಾತ್ಮಕವಾಗಿ ಸ್ಪಂದನೆ ಸಿಕ್ಕಿಲ್ಲ. ಮತ್ತೊಮ್ಮೆ ಅವರ ಮನವೊಲಿಸುವ ಪ್ರಯತ್ನ ಮಾಡುತ್ತೇವೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಗೌಡಪ್ಪ ಖೋತ ಮಾತನಾಡಿ, ಅಥಣಿ ಪಟ್ಟಣದಲ್ಲಿ ಭಿಕ್ಷಾಟನೆ ಮಾಡುವುದು ನನ್ನ ಗಮನಕ್ಕೆ ಬಂದಿದೆ. ಪಾಲಕರ ಜತೆ ಮಾತನಾಡಿ ಮಕ್ಕಳನ್ನು ಶಾಲೆಗೆ ಕರೆತರುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ:ಕಲಬುರಗಿ: ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಯುವಕನ ಬರ್ಬರ ಕೊಲೆ