ಬೆಳಗಾವಿ:ಜಿಲ್ಲೆಯಲ್ಲಿ 17 ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬಿನ ಹಣ ಪಾವತಿ ಮಾಡಿದ್ದು, ಬಾಕಿ ಉಳಿಸಿರುವ ರೈತರ ಕಬ್ಬಿನ ಹಣವನ್ನ 15 ದಿನಗಳಲ್ಲಿ ರೈತರಿಗೆ ಪಾವತಿಸಬೇಕು ಎಂದು ಸಕ್ಕರೆ ಮತ್ತು ಕಾರ್ಮಿಕ ಇಲಾಖೆ ಸಚಿವ ಶಿವರಾಮ ಹೆಬ್ಬಾರ್ ಸೂಚಿಸಿದ್ದಾರೆ.
ಸಕ್ಕರೆ ಮತ್ತು ಕಾರ್ಮಿಕ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಕ್ಕರೆ ಸಚಿವಾಲಯ ಸುವರ್ಣ ಸೌಧಕ್ಕೆ ಸ್ಥಳಾಂತರ ಮಾಡಬೇಕು ಎಂದು ಸಾಕಷ್ಟು ಮನವಿಗಳು ಬರುತ್ತಿದ್ದು, ಒಂದೇ ಇಲಾಖೆಯನ್ನ ಸ್ಥಳಾಂತರಿಸಲು ಆಗುವುದಿಲ್ಲ. ಹಾಗಾಗಿ ಇಲಾಖೆಗಳನ್ನು ವಿಲೀನಗೊಳಿಸುವಾಗ ಸಕ್ಕರೆ ಇಲಾಖೆಯ ಕಚೇರಿಯನ್ನು ಸ್ಥಳಾಂತರಿಸುವ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು. ಜೋಳ ಬೆಳದ ರೈತರಿಗೆ ಪರಿಹಾರವಾಗಿ 5,000 ರೂ. ನೀಡಲಾಗುತ್ತಿದ್ದು, ಈ ಯೋಜನೆಯಿಂದ 40 ಲಕ್ಷ ರೈತರಿಗೆ ಅನುಕೂಲ ಆಗಲಿದೆ ಎಂದರು.
ಸರ್ಕಾರಕ್ಕೆ ಮಾಹಿತಿ ನೀಡದೆ ಕಾರ್ಖಾನೆ ಬಂದ್ ಮಾಡುವಂತಿಲ್ಲ: 100ಕ್ಕಿಂತ ಹೆಚ್ಚು ಕಾರ್ಮಿಕರು ಇರುವ ಕಾರ್ಖಾನೆಯ ಮಾಲೀಕರು ಸರ್ಕಾರಕ್ಕೆ ತಿಳಿಸದೆ ತಮ್ಮ ಕಾರ್ಖಾನೆಗಳನ್ನು ಮುಚ್ಚುವಂತಿಲ್ಲ. ಈ ರೀತಿ ಸರ್ಕಾರಕ್ಕೆ ತಿಳಿಸದೆ ಇರುವ ಕಾರ್ಖಾನೆಗಳ ಬಗ್ಗೆ ಮಾಹಿತಿ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕೋವಿಡ್-19 ಪರಿಣಾಮವಾಗಿ ಅನೇಕ ಕಾರ್ಖಾನೆಗಳು ಕಾರ್ಮಿಕರಿಗೆ ಸಂಬಳ ನೀಡುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ಅದರ ಬಗ್ಗೆ ಮಾಹಿತಿ ಕಲೆಹಾಕಿ, ಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಸೂಚಿಸಿದರು.
ಸರ್ಕಾರ ಈಗಾಗಲೇ ಘೋಷಣೆ ಮಾಡಿರುವಂತೆ ಕಾರ್ಮಿಕರಿಗೆ 5,000 ರೂ. ಪರಿಹಾರ ಧನ ವಿತರಣೆ ಮಾಡಲಾಗುತ್ತಿದ್ದು, 20 ದಿನಗಳಲ್ಲಿ ಪರಿಹಾರ ಧನ ಕಾರ್ಮಿಕರಿಗೆ ಮುಟ್ಟಿಸಲು ಅಧಿಕಾರಿಗಳು ಶ್ರಮಿಸಬೇಕು. ನಗರದಲ್ಲಿರುವ ಇಎಸ್ಐ ಆಸ್ಪತ್ರೆಯು 50 ಹಾಸಿಗೆವುಳ್ಳ ಆಸ್ಪತ್ರೆಯಾಗಿದ್ದು, ಮುಂದಿನ ದಿನಗಳಲ್ಲಿ 100 ಹಾಸಿಗೆಯ ಆಸ್ಪತ್ರೆ ಮಾಡಲು ಯೋಜನೆ ರೂಪಿಸುತ್ತೇವೆ ಎಂದರು.