ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆ ಅಂತಿಮ ಕ್ಷಣದಲ್ಲಿ ಕಾವು ಪಡೆದುಕೊಂಡಿದೆ. ಇಷ್ಟು ದಿನ ಚುನಾವಣೆ ಪ್ರಕ್ರಿಯೆಯಿಂದ ದೂರವೇ ಇದ್ದ ಸಚಿವ ರಮೇಶ್ ಜಾರಕಿಹೊಳಿ ಈಗ ಅಖಾಡಕ್ಕೆ ಇಳಿದಿದ್ದಾರೆ.
ಡಿಸಿಸಿ ಬ್ಯಾಂಕ್ ಎಲೆಕ್ಷನ್: ಕೊನೆ ಕ್ಷಣದಲ್ಲಿ ಅಖಾಡಕ್ಕಿಳಿದ ರಮೇಶ್ ಜಾರಕಿಹೊಳಿ - ಶಾಸಕಿ ಅಂಜಲಿ ನಿಂಬಾಳ್ಕರ್
ಇಷ್ಟು ದಿನ ಚುನಾವಣೆ ಪ್ರಕ್ರಿಯೆಯಿಂದ ದೂರವಿದ್ದ ಸಚಿವ ರಮೇಶ್ ಜಾರಕಿಹೊಳಿ ಕೊನೆಯ ಕ್ಷಣದಲ್ಲಿ ಅಖಾಡಕ್ಕೆ ಇಳಿದಿದ್ದು, ಬೆಳಗಾವಿ ಡಿಸಿಸಿ ಬ್ಯಾಂಕ್ನ ಕೊಠಡಿವೊಂದರಲ್ಲಿ ರಮೇಶ ಕತ್ತಿ ಜೊತೆ ಗೌಪ್ಯ ಸಭೆ ನಡೆಸಿದ್ದಾರೆ.
ಖಾನಾಪುರ ತಾಲೂಕಿನಿಂದ ನಾಮಪತ್ರ ಸಲ್ಲಿಸಿರುವ ಅರವಿಂದ ಪಾಟೀಲ ಜೊತೆಗೆ ರಮೇಶ್ ಜಾರಕಿಹೊಳಿ ಇಂದು ಬೆಳಗಾವಿ ಡಿಸಿಸಿ ಬ್ಯಾಂಕಿಗೆ ಆಗಮಿಸಿದರು. ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಬಯಸಿ ಖಾನಾಪುರ ಕ್ಷೇತ್ರದಿಂದ ಶಾಸಕಿ ಅಂಜಲಿ ನಿಂಬಾಳ್ಕರ್ ಹಾಗೂ ಅರವಿಂದ ಪಾಟೀಲ ನಾಮಪತ್ರ ಸಲ್ಲಿಸಿದ್ದಾರೆ. ಇದೀಗ ನಾಮಪತ್ರ ಹಿಂಪಡೆಯಲು ಉಭಯ ನಾಯಕರು ಒಪ್ಪದ ಕಾರಣ, ಜಿಲ್ಲೆಯ ಕಮಲ ನಾಯಕರಿಗೆ ಖಾನಾಪುರ ಕ್ಷೇತ್ರ ಕಗ್ಗಂಟಾಗಿದೆ. ಅವಿರೋಧ ಆಯ್ಕೆಗೆ ಖಾನಾಪುರ ಅಭ್ಯರ್ಥಿಗಳು ಒಪ್ಪುತ್ತಿಲ್ಲ. ಇಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವ ಜಾರಕಿಹೊಳಿ ಚುನಾವಣೆ ಅಖಾಡಕ್ಕೆ ಇಳಿದಿದ್ದಾರೆ.
ಬ್ಯಾಂಕ್ನ ಕೊಠಡಿವೊಂದರಲ್ಲಿ ಸಚಿವ ಜಾರಕಿಹೊಳಿ ಅವರು ರಮೇಶ ಕತ್ತಿಯೊಂದಿಗೆ ಗೌಪ್ಯ ಸಭೆ ನಡೆಸಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಅರವಿಂದ ಪಾಟೀಲ, ಲಕ್ಷ್ಮಣ ಸವದಿ ಜೊತೆಗೆ ಗುರುತಿಸಿಕೊಂಡಿದ್ದರು. ಇದೀಗ ಅರವಿಂದ ಪಾಟೀಲ ಅವರನ್ನೇ ಸಚಿವ ಜಾರಕಿಹೊಳಿ ತಮ್ಮತ್ತ ಸೆಳೆದಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿಗೆ ಠಕ್ಕರ್ ಕೊಡಲು ಸಚಿವ ಜಾರಕಿಹೊಳಿ ಅರವಿಂದ ಪಾಟೀಲ ಬೆನ್ನಿಗೆ ನಿಂತಿದ್ದಾರಾ? ಎಂಬ ಚರ್ಚೆ ತೀವ್ರಗೊಂಡಿವೆ.