ಬೆಳಗಾವಿ: ಕುರುಬ ಸಮುದಾಯವನ್ನು ಎಸ್‍ಟಿಗೆ ಸೇರಿಸುವಂತೆ ಆಗ್ರಹಿಸಿ ಜನವರಿ 15ರಂದು ಕಾಗಿನೆಲೆಯಿಂದ ಬೆಂಗಳೂರಿನವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಕೊನೆ ದಿನ ಬೆಂಗಳೂರಿನಲ್ಲಿ ಸುಮಾರು 10 ಲಕ್ಷ ಜನರನ್ನು ಸೇರಿಸುವ ಗುರಿ ಹೊಂದಿದ್ದೇವೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದರು.
ನಗರದ ಕಣಬರಗಿ ರಸ್ತೆಯ ಸಂಕಲ್ಪ ಗಾರ್ಡನ್‍ನಲ್ಲಿ ಕುರುಬ ಸಮುದಾಯ ಎಸ್‍ಟಿಗೆ ಸೇರಿಸುವ ನಿಟ್ಟಿನಲ್ಲಿ ವಿವಿಧ ಸ್ವಾಮೀಜಿಗಳು, ಸಮಾಜದ ಮುಖಂಡರ ಉಪಸ್ಥಿತಿಯಲ್ಲಿ ಬೆಳಗಾವಿ ವಿಭಾಗ ಮಟ್ಟದ ಸಭೆಯಲ್ಲಿ ಮಾತನಾಡಿದರು. ಕುರುಬ ಸಮಾಜಕ್ಕೆ ಒಳ್ಳೆಯದು ಆಗಬೇಕೆಂದು ಸ್ವಾಮೀಜಿಗಳು ಪಾದಯಾತ್ರೆ ಹಮ್ಮಿಕೊಂಡಿದ್ದು, ನಮ್ಮ ಕಡೆಯಿಂದ ಸಾಧ್ಯವಾದಷ್ಟು ಸಹಕಾರ ನೀಡಲಾಗುವುದು ಎಂದರು.
ಕುರುಬ ಸಮಾಜಕ್ಕೆ ಎಸ್ಟಿ ಹೋರಾಟದ ಬೇಡಿಕೆ ಈಡೇರಲು ಎರಡು ವರ್ಷ ಹೋಗುತ್ತೋ ಏನೋ.. ಆದರೆ, ಆಗೋವರೆಗೂ ಮಾತ್ರ ಹೋರಾಟವನ್ನು ಕೈಬಿಡೋದಿಲ್ಲ ಎಂದು ಸ್ಪಷ್ಟಪಡಿಸಿದರು. ಜನವರಿ 15 ರಿಂದ ಕಾಗಿನೆಲೆಯಿಂದ ಬೆಂಗಳೂರಿನವರೆ ಪಾದಯಾತ್ರೆ ನಡೆಸೋಣ. ಅದಕ್ಕೂ ಮೊದಲು ಡಿ.28ರಂದು ಕಾಗಿನೆಲೆಯಲ್ಲಿ ಒಂದು ಪೂರ್ವಭಾವಿ ಸಭೆ ಮಾಡಲಾಗುವುದು.
ಆ ಸಭೆಯಲ್ಲಿ ಸಮಾಜದ ಮಠ ಮಂದಿರಗಳ ಅಭಿವೃದ್ಧಿಗೆ ಬೇಕಾದ ಆರ್ಥಿಕ ಸಹಾಯದ ಪಟ್ಟಿ ತೆಗೆದುಕೊಂಡು ಬರಬೇಕು. ನಂತರ ಪಾದಯಾತ್ರೆಯ ಕೊನೆ ದಿನ ಕನಿಷ್ಠ 10 ಲಕ್ಷ ಜನರನ್ನು ಸೇರಿಸುವ ಗುರಿಯನ್ನು ನಾವು ಇಟ್ಟುಕೊಳ್ಳೋಣ. ಈ ಮೂಲಕ ಸರ್ಕಾರದ ಮುಂದೆ ನಮ್ಮ ಸಮಾಜದ ಬೇಡಿಕೆ ಇರಿಸೋಣ ಎಂದರು.