ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯ ಪ್ರಚಾರ ಭರಾಟೆ ಜೋರಾಗಿದೆ.ಬೆಳಗಾವಿ ಪರಿಷತ್ ಚುನಾವಣೆಯಲ್ಲಿ ನಾವು ಕುಸ್ತಿ ಮಾಡದೇ ಗೆದ್ದು ತೋರಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಕುಸ್ತಿ ಮಾಡದೇ ಗೆಲ್ಲುತ್ತೇವೆ: ಸಚಿವ ಗೋವಿಂದ ಕಾರಜೋಳ ನಗರದ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪರಿಷತ್ ಚುನಾವಣೆ ಸಾರ್ವತ್ರಿಕ ಚುನಾವಣೆಯಲ್ಲ. ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಮತ ಚಲಾಯಿಸುವ ಚುನಾವಣೆ ಇದು. ಬೆಳಗಾವಿಯಲ್ಲಿ ಬಿಜೆಪಿ ಬೆಂಬಲಿತ 5,150 ಜನರು ಗೆದ್ದಿದ್ದಾರೆ. ಹೀಗಾಗಿ ನಮ್ಮ ಅಭ್ಯರ್ಥಿ ಗೆಲ್ಲಿಸಲು ಕುಸ್ತಿ ಮಾಡುವ ಅವಶ್ಯಕತೆ ಇಲ್ಲ. ನಮ್ಮ ಬೆಂಬಲಿತ ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳು ಬಿಜೆಪಿಗೆ ಮತ ಹಾಕುತ್ತಾರೆ ಎಂದರು.
ಕಾಂಗ್ರೆಸ್ ಏಕೆ ಆರೋಗ್ಯ ವ್ಯವಸ್ಥೆ ಸುಧಾರಿಸಿಲ್ಲ?:
ನಮ್ಮ ಸರ್ಕಾರ ದಿನದ 24 ಗಂಟೆ ಕೋವಿಡ್ ನಿರ್ವಹಣೆಗೆ ಶ್ರಮಿಸುತ್ತಿದೆ. ನಮ್ಮ ಕೆಲಸವನ್ನು ಕಾಂಗ್ರೆಸ್ ಕಣ್ಣು ತೆರೆದು ನೋಡಬೇಕು. ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ ಹಾಗು ಮಾಜಿ ಸಿಎಂ ಬಿಎಸ್‌ವೈ ಅವರನ್ನು ಟೀಕಿಸಿದ್ರೆ ಹೇಗೆ?. ಇಷ್ಟು ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಏಕೆ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಲಿಲ್ಲ ಎಂದು ಪ್ರಶ್ನಿಸಿದರು.
ಶಾಸಕರು, ಸಂಸದರು ಒಗ್ಗಟ್ಟಾಗಿ ಕೆಲಸ ಮಾಡುತ್ತಾರೆ:
ಕಳೆದ 3 ವರ್ಷಗಳಿಂದ ಬರುತ್ತಿರುವ ಪ್ರವಾಹವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿದ್ದೇವೆ. ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವಿಗೆ ತಿಣುಕಾಡುತ್ತಿದ್ದಾರೆ. ಡಿ. 14 ರ ಮಧ್ಯಾಹ್ನ ಅವರೆಲ್ಲ ನಿರಾಶೆಗೊಳ್ಳುತ್ತಾರೆ. ರಾಜ್ಯದಲ್ಲಿ ಬಿಜೆಪಿಯ 15 ಅಭ್ಯರ್ಥಿಗಳು ಗೆಲುವು ದಾಖಲಿಸುತ್ತಾರೆ. ಬೆಳಗಾವಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಕೂಡ ಗೆಲ್ಲುತ್ತಾರೆ. ಬೆಳಗಾವಿಯಲ್ಲಿ 13 ಶಾಸಕರು, ಮೂವರು ಸಂಸದರಿದ್ದಾರೆ. ನಮ್ಮ ಶಾಸಕರು, ಸಂಸದರು ಒಗ್ಗಟ್ಟಾಗಿ ಕೆಲಸ ಮಾಡುತ್ತಾರೆ. ಪಕ್ಷದ ಬದ್ಧತೆ ಮೇಲೆಯೇ ಎಲ್ಲ ನಾಯಕರು ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಕಾರಜೋಳ ಹೇಳಿದ್ರು.
ಜಾತಿ ರಾಜಕಾರಣ ಮಾಡುವುದೇ ಕಾಂಗ್ರೆಸ್ ಸಂಸ್ಕೃತಿ. ನಾವು ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ. ನಮ್ಮ ಎದುರಾಳಿ ಯಾರೂ ಇಲ್ಲ, ಬಿಜೆಪಿ ಇಲ್ಲಿ ಗೆಲ್ಲಲಿದೆ. ಕಣ್ಣಿನ ಶಸ್ತ್ರ ಚಿಕಿತ್ಸೆ ಕಾರಣಕ್ಕೆ ನಾನು ಬೆಳಗಾವಿಗೆ ಬಂದಿರಲಿಲ್ಲ. ಬೆಳಗಾವಿ ಬಗ್ಗೆ ಪ್ರೀತಿ ಕಡಿಮೆ ಆಗಿಲ್ಲ. ಇನ್ಮುಂದೆ ನಿರಂತರ ಬರುತ್ತೇನೆ. ಪಾಲಿಕೆ ಚುನಾವಣೆ ಫಲಿತಾಂಶದಿಂದ ಕಾಂಗ್ರೆಸ್ ನಾಯಕರು ಎದೆ ಒಡೆದುಕೊಂಡಿದ್ದಾರೆ. ಗೋವಿಂದ ಕಾರಜೋಳ ಅವರನ್ನು ಕಂಡರೆ ಅವರಿಗೆ ಭಯ ಇದೆ ಎಂದು ಜಿಲ್ಲಾ ಕಾಂಗ್ರೆಸ್ ನಾಯಕರಿಗೆ ಸಚಿವ ಕಾರಜೋಳ ತಿರುಗೇಟು ನೀಡಿದರು.
ಇದನ್ನೂ ಓದಿ:ಕರ್ನಾಟಕದಲ್ಲಷ್ಟೇ ಕಾಂಗ್ರೆಸ್ ಅಲ್ಪಸ್ವಲ್ಪ ಉಸಿರಾಡುತ್ತಿದೆ : ಬಿ ಎಸ್ ಯಡಿಯೂರಪ್ಪ ವ್ಯಂಗ್ಯ