ಬೆಳಗಾವಿ: ನಮ್ಮದೇ ನೆಲದಲ್ಲಿ ನಮ್ಮ ಧ್ವಜ ಹಾರಿಸಿದ್ದಕ್ಕೆ ಅದನ್ನು ತೆರವುಗೊಳಿಸುತ್ತೇವೆ ಅಂತಿರುವ ಪುಂಡ ಮರಾಠಿಗರು ನಾಳೆ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಎಂಇಎಸ್ ಮತ್ತು ಶಿವಸೇನೆಗೆ ಕನ್ನಡಪರ ಮುಖಂಡರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ಏಕೀಕರಣಗೊಂಡ ಬಳಿಕ ಬೆಳಗಾವಿ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಕನ್ನಡದ ಧ್ವಜ ಹಾರಿರಲಿಲ್ಲ. ಆದ್ರೆ, ಕನ್ನಡಪರ ಹೋರಾಟಗಾರರು ರಾಜಾರೋಷವಾಗಿ ಧ್ವಜಸ್ತಂಭದ ಜತೆಗೆ ಬಂದು ಪಾಲಿಕೆ ಮುಂದೆ ಧ್ವಜ ನೆಟ್ಟು ಮೂರು ದಿನಗಳ ಕಾಲ ಧ್ವಜಸ್ತಂಭ ಕಾದಿದ್ದರು.
ಮರಾಠಿಗರಿಗೆ ಕನ್ನಡಪರ ಸಂಘಟನೆಗಳಿಂದ ಎಚ್ಚರಿಕೆ ಇದನ್ನು ಸಹಿಸದ ನಾಡದ್ರೋಹಿಗಳು ಇದೀಗ ಧ್ವಜಸ್ತಂಭ ತೆರವಿಗೆ ಮುಂದಾಗಿದ್ದಾರೆ. ಇದಕ್ಕೆ ಮಹಾರಾಷ್ಟ್ರ ಸರ್ಕಾರ ಕೂಡ ಸಾಥ್ ಕೊಡುತ್ತಿದ್ದು ನಾಳೆ ಬೃಹತ್ ಪ್ರತಿಭಟನೆ ಮಾಡಲು ಹೊರಟ ಎಂಇಎಸ್ ಮತ್ತು ಶಿವಸೇನೆಗೆ ಕನ್ನಡಪರ ಮುಖಂಡರು ಕೊಡ ಎಚ್ಚರಿಕೆ ನೀಡಿದ್ದಾರೆ.
ಡಿ.28ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಧ್ವಜಸ್ತಂಭ ಸಮೇತ ಬಂದ ಕನ್ನಡಪರ ಹೋರಾಟಗಾರರು ಕನ್ನಡ ಧ್ವಜ ಹಾರಿಸುವುದರ ಮೂಲಕ ಕನ್ನಡ ಪ್ರೇಮ ಮೆರೆದಿದ್ದರು. ಇಡೀ ಕರ್ನಾಟಕವೇ ಅಂದು ಸಂಭ್ರಮಿಸಿತ್ತು. ಆದ್ರೆ, ನಮ್ಮ ನೆಲದಲ್ಲಿದ್ದ ನಾಡದ್ರೋಹಿಗಳು ಮಾತ್ರ ಅಂದು ನಿದ್ದೆ ಮಾಡಿರಲಿಲ್ಲ.
ಮಾರನೇ ದಿನವೇ ಕನ್ನಡ ಧ್ವಜಸ್ತಂಭ ತೆರವು ಮಾಡಿ, ಇಲ್ಲವಾದ್ರೆ ನಾವೇ ಮಾಡುತ್ತೇವೆ ಅಂತಾ ಜಿಲ್ಲಾಡಳಿತಕ್ಕೆ ಡೆಡ್‌ಲೈನ್ ಕೊಟ್ಟಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ ಜ.17ರಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಉದ್ದಟತನದ ಟ್ವೀಟ್ ಮಾಡಿದ್ದು, ಇದು ಕನ್ನಡಿಗರನ್ನು ಕೆರಳಿಸುವಂತೆ ಮಾಡಿದೆ.
ಉದ್ಧವ್ ಠಾಕ್ರೆಯವರು ತಮ್ಮ ಟ್ವೀಟ್ನಲ್ಲಿ ಮರಾಠಿ ಭಾಷಿಕರು ಬಹುಸಂಖ್ಯಾತರಾಗಿರುವ ಕರ್ನಾಟಕದ ಆಕ್ರಮಿತ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡುತ್ತೇವೆ ಎಂದು ಉದ್ಧಟತನದ ಹೇಳಿಕೆ ನೀಡಿದ್ದಾರೆ. ಇದರ ಜತೆಗೆ ಕೆಲವು ಸಚಿವರು ಕೂಡ ಇದಕ್ಕೆ ಧ್ವನಿಗೂಡಿಸಿದ್ದರು. ಇದರಿಂದಾಗಿ ಕನ್ನಡಪರ ಹೋರಾಟಗಾರರು ಪ್ರತಿಭಟನೆ ಮಾಡಿ ಉದ್ಧವ್ ಠಾಕ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಇದರ ಬೆನ್ನಲ್ಲೇ ಇದೀಗ ಮತ್ತೆ ಎಂಇಎಸ್ ಹಾಗೂ ಶಿವಸೇನೆ ಸಂಘಟನೆಗಳು ನಾಳೆ ಬೆಳಗಾವಿಯಲ್ಲಿ ಪಾಲಿಕೆ ಮುಂದೆ ನೆಟ್ಟಿರುವ ಕನ್ನಡ ಧ್ವಜಸ್ತಂಭ ತೆರವು ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಲಿದ್ದಾರೆ.
ಇನ್ನು, ಪ್ರತಿಭಟನೆ ನಡೆಸಲು ಪೊಲೀಸ್ ಇಲಾಖೆ ಅನುಮತಿ ನೀಡದಿದ್ದರೂ ಸಹ ಪ್ರತಿಭಟನೆ ಮಾಡಲು ಮುಂದಾಗಿದ್ದು ಇದಕ್ಕೆ ಮಹಾರಾಷ್ಟ್ರ ಸರ್ಕಾರವೇ ಬೆಂಬಲ ನೀಡಿರೋದು ವಿಪರ್ಯಾಸ. ನಾಳೆ ನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆ ಬೆಳಗಾವಿ ಚಲೋ ಅಂತಾ ಪೋಸ್ಟ್‌ಗಳನ್ನು ಪುಂಡರು ವೈರಲ್ ಮಾಡುತ್ತಿದ್ದಾರೆ. ಈಗಾಗಲೇ ಮಹಾನಗರ ಪಾಲಿಕೆ ಮುಂಭಾಗ ಒಂದು ಡಿಆರ್ ತುಕಡಿ ನೇಮಕ ಮಾಡಿದ್ದು, ನಾಳೆ ಇನ್ನೂರಕ್ಕೂ ಅಧಿಕ ಪೊಲೀಸರನ್ನು ಸ್ಥಳಕ್ಕೆ ನಿಯೋಜನೆ ಮಾಡಿದ್ದಾರೆ.
ನಾಳೆ ಬೆಳಗಾವಿಯಲ್ಲಿ ನಾಡದ್ರೋಹಿಗಳು ಕನ್ನಡ ಧ್ವಜಸ್ತಂಭ ತೆರವು ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಲಿದ್ದಾರೆ. ಪ್ರತಿಭಟನೆಗೆ ಮಹಾರಾಷ್ಟ್ರದ ಕೊಲ್ಲಾಪುರ, ಪುಣೆಯಿಂದಲೂ ಶಿವಸೇನೆ ಕಾರ್ಯಕರ್ತರು ಆಗಮಿಸುತ್ತಿದ್ದು, ಈ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಶಾಂತವಾಗಿರುವ ಕುಂದಾನಗರಿಯಲ್ಲಿ ಅಶಾಂತಿ ಉಂಟು ಮಾಡುವುದರ ಜತೆಗೆ ನಮ್ಮದೇ ನಾಡಿಗೆ ದ್ರೋಹ ಬಗೆಯುವ ಕೆಲಸಕ್ಕೆ ಮುಂದಾಗಿದ್ದಾರೆ.
ಹಾಗಾಗಿ, ಮರಾಠಿ ಪುಂಡರ ನಾಳೆಯ ಹೋರಾಟಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅನುಮತಿ ನೀಡಬಾರದು. ಜತೆಗೆ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುತ್ತಿರುವ ಪುಂಡ ಮರಾಠಿಗರಿಗೆ ರಾಜ್ಯಕ್ಕೆ ಬರಲು ಅನುಮತಿ ನೀಡಬಾರದು. ಒಂದು ವೇಳೆ ಅನುಮತಿ ನೀಡಿದ್ರೆ ಪಾಲಿಕೆ ಬಳಿ ನಾಡದ್ರೋಹಿಗಳನ್ನು ನಾವು ಬರಲು ಬಿಡುವುದಿಲ್ಲ, ಆಗ ಏನಾದ್ರೂ ಅನಾಹುತ ಸಂಭವಿಸಿದ್ರೆ ಅದಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯೇ ನೇರ ಹೊಣೆಯಾಗಲಿದೆ ಅಂತಾ ಕನ್ನಡ ಪರ ಸಂಘಟನೆಗಳು ಎಚ್ಚರಿಸಿವೆ.
ಇನ್ನು, ನಮ್ಮದೇ ನೆಲದಲ್ಲಿ ನಮ್ಮ ಧ್ವಜ ಹಾರಿಸಿದ್ದಕ್ಕೆ ಅದನ್ನು ತೆರವುಗೊಳಿಸುತ್ತೇವೆ ಅಂತಿರುವ ಪುಂಡ ಮರಾಠಿಗರ ವಿರುದ್ಧ ಕೂಡಲೇ ಸರ್ಕಾರ ಕ್ರಮಕ್ಕೆ ಮುಂದಾಗಬೇಕು. ಶಾಂತವಾಗಿರುವ ನೆಲದಲ್ಲಿ ಶಾಂತಿ ಕದಡಲು ಯತ್ನಿಸುತ್ತಿರುವ ಎಂಇಎಸ್ ಮತ್ತು ಶಿವಸೇನೆ ಸಂಘಟನೆಯನ್ನು ಬ್ಯಾನ್ ಮಾಡಬೇಕು. ನಾಳೆ ನಡೆಯುತ್ತಿರುವ ನಾಡದ್ರೋಹಿಗಳ ಪ್ರತಿಭಟನೆಗೆ ಜಿಲ್ಲಾಡಳಿತ ಬ್ರೇಕ್ ಹಾಕಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ಒತ್ತಾಯಿಸಿದ್ದಾರೆ.