ಚಿಕ್ಕೋಡಿ/ಗೋಕಾಕ್: ಇಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿರುವುದರಿಂದ ಅಥಣಿ, ಕಾಗವಾಡ ಹಾಗೂ ಗೋಕಾಕ್ ಕ್ಷೇತ್ರಗಳಲ್ಲಿ ಆಯಾ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದು, ನಾಮಪತ್ರ ಸಲ್ಲಿಕೆಗೂ ಮುನ್ನ ಬಲಪ್ರದರ್ಶನ ಮಾಡಿದ್ದು ಕಂಡುಬಂತು.
ಅಥಣಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಹೇಶ್ ಕುಮಟಳ್ಳಿ, ಅಥಣಿ ತಹಶೀಲ್ದಾರ್ ಕಚೇರಿಯಲ್ಲಿರುವ ಚುನಾವಣಾ ಅಧಿಕಾರಿ ಜೀಲಾನಿ ಮೋಕಾಸಿ ಮತ್ತು ಅಥಣಿ ತಹಶೀಲ್ದಾರ್ ಎಮ್ ಎನ್ ಬಳ್ಳಿಗಾರ ಅವರಿಗೆ ನಾಮಪತ್ರ ಸಲ್ಲಿಕೆ ಮಾಡಿದರು. ಈ ಸಂದರ್ಭದಲ್ಲಿ ಡಿಸಿಎಮ್ ಲಕ್ಷ್ಮಣ ಸವದಿ, ಬೆಳಗಾವಿ ಉಸ್ತುವಾರಿ ಜಗದೀಶ್ ಶೆಟ್ಟರ್, ಮಹೇಶ ಟೆಂಗಿನಕಾಯಿ ಸಾಥ್ ನೀಡಿದರು.
ಹಾಗೆಯೇ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಕೂಡ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕಾಂಗ್ರೆಸ್ ಮುಖಂಡರಾದ ಎಂ. ಬಿ. ಪಾಟೀಲ್ ಇವರ ಜೊತೆಗೂಡಿ ಸಿದ್ದೇಶ್ವರ ದೇವಸ್ಥಾನದಿಂದ ಮಿನಿ ವಿಧಾನಸೌಧದವರೆಗೆ ಬೆಂಬಲಿಗರೊಂದಿಗೆ ಪಾದಯಾತ್ರೆ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಚುನಾವಣಾ ಅಧಿಕಾರಿ ಜೆಲಾನಿ ಮೊಕಾಶಿಗೆ ನಾಮಪತ್ರ ಸಲ್ಲಿಸಿದರು. ಬಳಿಕ ಮಾಧ್ಯಮದವರ ಜೊತೆ ಮಾತಾಡಿದ ಗಜಾನನ ಮಂಗಸೂಳಿ, ಕಾಂಗ್ರೆಸ್ ಅಭ್ಯರ್ಥಿ ಇಲ್ಲಿ ಜಯಭೇರಿ ಆಗುವುದು ಖಚಿತ, ಪಕ್ಷಕ್ಕೆ ದ್ರೋಹ ಬಗೆದ ಮಹೇಶ್ ಕುಮಟಳ್ಳಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದರು.
ಹಾಗೆಯೇ ಕಾಗವಾಡ ಕ್ಷೇತ್ರದಿಂದ ಮಾಜಿ ಶಾಸಕ ರಾಜು ಕಾಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಕಾಗೆ ನಾಮಪತ್ರ ಸಲ್ಲಿಕೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಎಂ.ಬಿ. ಪಾಟೀಲ್, ಈ ಉಪ ಚುನಾವಣೆ ಬೇಕಾಗಿರಲಿಲ್ಲ, ಬಿಜೆಪಿ ಕುತಂತ್ರದಿಂದ ಈ ಚುನಾವಣೆ ನಡೆಯುವಂತಾಯಿತು. ಅಥಣಿ ಹಾಗೂ ಕಾಗವಾಡ ಈ ಎರಡು ಕ್ಷೇತ್ರಗಳಲ್ಲಿ ಗೆಲುವು ನಮ್ಮದೇ, ಅನರ್ಹ ಶಾಸಕರಿಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು. ಬಳಿಕ ರಾಜು ಕಾಗೆ ಮಾತನಾಡಿ, ಗೆಲುವು ನಮ್ಮದೇ.. ಶ್ರೀಮಂತ ಪಾಟೀಲ್ ರೈತರಿಗೆ ಮೋಸ ಮಾಡುವ ವ್ಯಕ್ತಿ, ಅವರದು ಗೂಂಡಾ ಪ್ರವೃತ್ತಿ ಎಂದರು.
ಹಾಗೆಯೇ ಕಾಗವಾಡ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಶ್ರೀಮಂತ ಪಾಟೀಲ್ ಕೂಡ ಇಂದು ನಾಮಪತ್ರ ಸಲ್ಲಿಸಿದರು. ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಜಗದೀಶ್ ಶೆಟ್ಟರ್ ಮುಂದಾಳತ್ವದಲ್ಲಿ ಹಾಗೂ ಸಾವಿರಾರು ಕಾರ್ಯಕರ್ತರು ಈ ಸಂದರ್ಭದಲ್ಲಿದ್ದರು.