ಬೆಳಗಾವಿ:ರಾಜ್ಯದ ಗಡಿಭಾಗವನ್ನು ಪಿಒಕೆಗೆ ಹೋಲಿಸಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.
ಠಾಕ್ರೆ ಅವರಿಗೆ ಇತಿಹಾಸ ಪ್ರಜ್ಞೆಯಿಲ್ಲ. ಗಡಿ ಹಂಚಿಕೆಯಾಗಿದ್ದು ನಿನ್ನೆ, ಮೊನ್ನೆಯಲ್ಲ. ಎನ್‌ಸಿಪಿ, ಕಾಂಗ್ರೆಸ್ ನೆರವಿನಿಂದ ಅವರು ಅಧಿಕಾರದಲ್ಲಿದ್ದಾರೆ. ಮಹಾರಾಷ್ಟ್ರ ಪ್ರದೇಶ ಆಕ್ರಮಣವಾಗಿದೆ ಎಂದರೆ ಅದಕ್ಕೆ ಕಾರಣ ಕಾಂಗ್ರೆಸ್ ಅಲ್ಲವೇ? ಹಾಗಿದ್ದರೆ ಠಾಕ್ರೆ ಏಕೆ ಕಾಂಗ್ರೆಸ್ ಕೈಹಿಡಿದಿದ್ದಾರೆ ಎಂದು ಕಾಳೆಲೆದರು.
ದೇಶದಲ್ಲಿ ಭಾಷೆಗಾಗಿ ಎಂದೂ ಆಕ್ರಮಣ, ಹೋರಾಟ ನಡೆದಿಲ್ಲ. ಸೊಲ್ಲಾಪುರ, ಜತ್ತ, ಅಕ್ಕಲಕೋಟೆ ಮಹಾರಾಷ್ಟ್ರ ಆಕ್ರಮಿತ ಕರ್ನಾಟಕ ಎನ್ನಬಹುದಾ? ಕಾಸರಗೋಡು ಕೇರಳ ಆಕ್ರಮಿತ ಪ್ರದೇಶ ಅಂತ ಹೇಳಲಿಕ್ಕೆ ಬರುತ್ತಾ? ಯಾರಿಗೆ ಇತಿಹಾಸದ ಬಗ್ಗೆ ಪ್ರಜ್ಞೆ ಇರುವುದಿಲ್ಲವೋ ಅವರು ಮಾತ್ರ ಹೀಗೆಯೇ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ ಎಂದರು.
ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಬೆಳಗಾವಿಯಲ್ಲಿ ಮರಾಠಿಗರು ಸೇರಿದಂತೆ ಎಲ್ಲರೂ ಸೌಹಾರ್ದತವಾಗಿಯೇ ಇದ್ದಾರೆ. ಸೌಹಾರ್ದತೆ ಕೆಡಿಸಿ ರಾಜಕೀಯ ಲಾಭ ಪಡೆಯಲು ಆಗಾಗ ಇಲ್ಲಿ ಪ್ರಯತ್ನಗಳು ನಡೆದಿವೆ. ಮಹಾರಾಷ್ಟ್ರದ ಪುಣೆ, ಮುಂಬೈನಲ್ಲಿ ಕನ್ನಡಿಗರಿದ್ದಾರೆ. ಅದು ಕರ್ನಾಟಕಕ್ಕೆ ಸೇರಿದ್ದು ಎಂದು ಹೇಳಿದರೆ ನನ್ನಂಥ ಮೂರ್ಖ ಇನ್ನೊಬ್ಬರು ಇರುವುದಿಲ್ಲ. ಉದ್ಧವ್ ಠಾಕ್ರೆ ದಾರಿ ತಪ್ಪಿದ್ದಾರೆ. ಬಿಜೆಪಿ ಜೊತೆ ಕೈ ಜೋಡಿಸಿದ್ದರೆ ರಾಷ್ಟ್ರೀಯ ಹಿತಾಸಕ್ತಿ ಹೇಳಿಕೊಡುತ್ತದೆ. ಕಾಂಗ್ರೆಸ್ ಜೊತೆ ಸೇರಿದರೆ ಒಡೆದಾಳುವ, ದ್ವೇಷ ಹಚ್ಚುವ ಕೆಲಸ ಬಂದು ಬಿಡುತ್ತದೆ ಎಂದು ಠಾಕ್ರೆ ಅವರನ್ನು ಕಿಚಾಯಿಸಿದರು.