ಚಿಕ್ಕೋಡಿ: ಮಹಾರಾಷ್ಟ್ರದ ಪಶ್ಚಿಮ ಭಾಗದಲ್ಲಿ ಕಳೆದ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಕೃಷ್ಣಾ ನದಿಯಲ್ಲಿ ಒಳ ಹರಿವು ಹೆಚ್ಚಾಗಿದ್ದು, ಮತ್ತೆ ಚಿಕ್ಕೋಡಿ ಉಪವಿಭಾಗದಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಕೃಷ್ಣಾ ನದಿಯಲ್ಲಿ ಒಳ ಹರಿವು ಹೆಚ್ಚಳ-ಸೇತುವೆಗಳು ಜಲಾವೃತ! ಸೇತುವೆಗಳು ಜಲಾವೃತ:
ಕೊಯ್ನಾ ಜಲಾಶಯ ಭರ್ತಿ ಹಿನ್ನೆಲೆ, ಜಲಾಶಯದಿಂದ ನಿತ್ಯ ಕೃಷ್ಣಾ ನದಿಗೆ 70 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೊಳಿಸಲಾಗುತ್ತಿದೆ. ಪರಿಣಾಮ, ಚಿಕ್ಕೋಡಿ ಉಪವಿಭಾಗದ ಕೃಷ್ಣಾ ನದಿಗೆ ಅಡ್ಡಲಾಗಿರುವ ಯಡೂರ - ಕಲ್ಲೋಳ, ಮಾಂಜರಿ - ಬಾವನ ಸವದತ್ತಿ ಸೇತುವೆ, ಹಾಗೂ ದೂದಗಂಗಾ ನದಿಗೆ ಅಡ್ಡಲಾಗಿರುವ ಮಲಿಕವಾಡ - ದತ್ತವಾಡ ಸೇತುವೆ ಮತ್ತು ವೇದಗಂಗಾ ನದಿಗೆ ಅಡ್ಡಲಾಗಿರುವ ಯಕ್ಸಂಬಾ - ದಾನವಾಡ ಸೇತುವೆ ಜಲಾವೃತವಾಗಿದೆ. ಮುಳುಗಡೆ ಹೊಂದಿರುವ ನಾಲ್ಕು ಸೇತುವೆಗಳು ಕೆಳಹಂತದ ಸೇತುವೆಗಳಾಗಿದ್ದು, ವಾಹನ ಸವಾರರು ಪರ್ಯಾಯ ಮಾರ್ಗವಾಗಿ ಸಂಚರಿಸುತ್ತಿದ್ದಾರೆ.
ಪ್ರವಾಹ ಭೀತಿ:
ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ, ರಾಯಬಾಗ, ಅಥಣಿ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಮಹಾರಾಷ್ಟ್ರ ಸತಾರಾ ಜಿಲ್ಲೆಯಲ್ಲಿರುವ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಸದ್ಯ 70 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡುಗಡೆ ಮಾಡಲಾಗುತ್ತಿದೆ.
ಅದರೊಂದಿಗೆ ರಾಜಾಪುರ ಬ್ಯಾರೇಜ್ನಿಂದ 10 ಸಾವಿರ ಕ್ಯೂಸೆಕ್ ನೀರನ್ನು ಹಿಪ್ಪರಗಿ ಬ್ಯಾರೇಜ್ಗೆ ಹರಿಬಿಡಲಾಗುತ್ತಿದೆ. ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಬ್ಯಾರೇಜ್ನಲ್ಲಿ 80 ಸಾವಿರ ಕ್ಯೂಸೆಕ್ ಒಳಹರಿವು ಇರುವುದರಿಂದ ಅಷ್ಟೇ ಪ್ರಮಾಣದ ನೀರನ್ನು ಕೆಳಭಾಗದ ಆಲಮಟ್ಟಿ ಜಲಾಶಯಕ್ಕೆ ಹರಿಬಿಡಲಾಗುತ್ತಿದೆ.
ಚಿಕ್ಕೋಡಿ, ಕಾಗವಾಡ, ರಾಯಬಾಗ ಅಥಣಿ ತಾಲೂಕಿನಲ್ಲಿ ಮತ್ತೆ ಪ್ರವಾಹ ಭೀತಿ ಶುರುವಾಗಿದೆ. ಸದ್ಯ ನದಿ ಒಡಲಲ್ಲಿ ಹರಿಯುತ್ತಿದ್ದರೂ ನೀರಿನ ವೇಗ ಹೆಚ್ಚಾಗಿದ್ದರಿಂದ ನದಿಪಾತ್ರದ ಜನರಿಗೆ ಮತ್ತೆ ಆತಂಕ ಸೃಷ್ಟಿಸಿದೆ. ಇದೇ ರೀತಿ ನೀರಿನ ಒಳಹರಿವು ಹೆಚ್ಚಾದರೆ ಚಿಕ್ಕೋಡಿ ಉಪವಿಭಾಗದ ಕೆಳಹಂತದ ಸೇತುವೆಗಳಾದ ಯಡೂರ - ಅಂಕಲಿ, ಕುಡಚಿ - ರಾಯಬಾಗ ಸೇತುವೆಗಳು ಜಲಾವೃತವಾಗುತ್ತದೆ.
ಇದನ್ನೂ ಓದಿ:ಗೈರಾಣ ಜಮೀನು ಅತಿಕ್ರಮಿಸಿ ಕಲ್ಲುಗಣಿಗಾರಿಕೆ ಆರೋಪ: ಸೂಕ್ತ ಕ್ರಮಕ್ಕೆ ಕುರಿಗಾಹಿಗಳ ಆಗ್ರಹ
ಕೊಯ್ನಾ ಭರ್ತಿ
ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ಸತತ ಮಳೆಗೆ ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿರುವ 105ಟಿಎಂಸಿ ಸಾಮರ್ಥ್ಯದ ಕೋಯ್ನಾ ಜಲಾಶಯ ಭರ್ತಿ ಆಗಿರುವ ಹಿನ್ನೆಲೆ ಕಳೆದ ನಾಲ್ಕೈದು ದಿನಗಳಿಂದ ಕ್ರಮೇಣವಾಗಿ ನೀರನ್ನು ಕೃಷ್ಣಾ ನದಿಗೆ ಬಿಡುಗಡೆ ಮಾಡಲಾಗುತ್ತಿದೆ. ಪ್ರಸ್ತುತವಾಗಿ ಕೃಷ್ಣಾ ನದಿಗೆ ನಿತ್ಯ 70ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಇದರಿಂದ ನಾಲ್ಕು ಸೇತುವೆಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ಪರಿಣಾಮ ಪರ್ಯಾಯ ಮಾರ್ಗಗಳನ್ನು ಹಿಡಿದುಕೊಂಡು ಸಾರ್ವಜನಿಕರು ಸಂಚರಿಸುತ್ತಿದ್ದಾರೆ.