ಚಿಕ್ಕೋಡಿ:ರಾಜ್ಯದಲ್ಲಿ ಮತ್ತೆ ಕೋವಿಡ್ ಅಬ್ಬರ ಹೆಚ್ಚುತ್ತಿದ್ದು, ಸರ್ಕಾರ ಶನಿವಾರ ಮಾರ್ಗಸೂಚಿಗಳನ್ನು ಹೊರಡಿಸಿದೆ. ಆದ್ರೆ ಗಡಿಯಲ್ಲಿ ತಪಾಸಣೆ ನಡೆಸುತ್ತಿದ್ದ ಪೊಲೀಸರ ಮೇಲೆ ಮಹಾರಾಷ್ಟ್ರ ಮೂಲದ ವೈದ್ಯರೊಬ್ಬರು ಪೊಲೀಸರ ಮೇಲೆಯೇ ಹಲ್ಲೆ ನಡೆಸಲು ಯತ್ನಿಸಿದ ಘಟನೆ ಕೊಗನೊಳ್ಳಿ ಚೆಕ್ಪೋಸ್ಟ್ನಲ್ಲಿ ಭಾನುವಾರ ನಡೆದಿದೆ.
ಓಮಿಕ್ರೋನ್ ವೈರಸ್ ಭೀತಿ ಹಿನ್ನೆಲೆ ಸರ್ಕಾರದ ಆದೇಶದಂತೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್ಪೋಸ್ಟ್ನಲ್ಲಿ ಮಹಾರಾಷ್ಟ್ರದಿಂದ ಬರುವ ಎಲ್ಲರಿಗೂ ಕಡ್ಡಾಯ ತಪಾಸಣೆಗೆ ಸೂಚಿಸಲಾಗಿದೆ. ಇದರಂತೆ ಗಡಿಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ ಜಿಲ್ಲಾ ಪೊಲೀಸರು ತೀವ್ರ ತಪಾಸಣೆ ಮಾಡುತ್ತಿದ್ದಾರೆ.
ಮಹಾರಾಷ್ಟ್ರದಿಂದ ಆಗಮಿಸುವ ಎಲ್ಲ ಪ್ರಯಾಣಿಕರ ಕೋವಿಡ್ ನೆಗೆಟಿವ್ ವರದಿ ಹಾಗೂ ಕೊರೊನಾ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ, ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ವೈದ್ಯ ಡಾ.ಸ್ವಾಮಿ ನಂದಿಮಠ ಎಂಬುವರು ಕೋವಿಡ್ ನೆಗೆಟಿವ್ ವರದಿ, ಕೊರೊನಾ ಲಸಿಕೆ ಪಡೆಯದೇ ಬಂದಿದ್ದರಿಂದ ಅವರನ್ನು ಪೊಲೀಸರು ಗಡಿಯಲ್ಲೇ ತಡೆದಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲೇ ಮೊದಲ ಪ್ರಯೋಗ: ಪುತ್ತೂರಿನ ಶಾಲಾ ಮೈದಾನದಲ್ಲಿ ಭತ್ತ ನಾಟಿ ಯಶಸ್ವಿ
ಇದಕ್ಕೆ ವಿರೋಧ ವ್ಯಕ್ತಪಡಿಸಿದ ವೈದ್ಯ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಅಲ್ಲದೇ, ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿ ಪೊಲೀಸರೊಬ್ಬರ ಕೊರಳ ಪಟ್ಟಿ ಹಿಡಿದು ಎಳೆದಾಡಿದ್ದಾರೆ. ಸರ್ಕಾರದ ಮಾರ್ಗಸೂಚಿ ಪಾಲಿಸದ ವೈದ್ಯನನ್ನು ಪೊಲೀಸರು ವಶಕ್ಕೆ ಪಡೆದು, ಕೇಸ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.