ಕರ್ನಾಟಕ

karnataka

ಬಚ್ಚನಕೇರಿ ಗ್ರಾಮದಲ್ಲಿ ಕಿತ್ತೂರು ಅರಮನೆ ನಿರ್ಮಾಣಕ್ಕೆ ವಿರೋಧ: ಆ.2ರಂದು ಕಿತ್ತೂರು ಬಂದ್

By

Published : Jul 30, 2022, 12:44 PM IST

ಕಿತ್ತೂರು ತಾಲೂಕಿನ ಬಚ್ಚನಕೇರಿ ಗ್ರಾಮದಲ್ಲಿ ಕಿತ್ತೂರು ಕೋಟೆಯ ಅರಮನೆ ನಿರ್ಮಾಣಕ್ಕೆ ಬೆಳಗಾವಿ ಜಿಲ್ಲಾಡಳಿತ ಮುಂದಾಗಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

kittoor palace
ಕಿತ್ತೂರು ಅರಮನೆ

ಬೆಳಗಾವಿ:ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿರುವ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಅರಮನೆಯ ಪ್ರತಿರೂಪ ಕಟ್ಟಡ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅಣಿಯಾಗಿದೆ. ಆದರೆ, ಕಿತ್ತೂರು ಪಟ್ಟಣದಲ್ಲಿರುವ ಚೆನ್ನಮ್ಮನ ಕೋಟೆ ಪಕ್ಕದಲ್ಲೇ ಅರಮನೆ ನಿರ್ಮಾಣ ಮಾಡುವಂತೆ ಸ್ಥಳೀಯರ ಬೇಡಿಕೆ ಇದೆ. ಈ ನಡುವೆ ಬೆಳಗಾವಿ ಜಿಲ್ಲಾಡಳಿತ ಕಿತ್ತೂರು ತಾಲೂಕಿನ ಬಚ್ಚನಕೇರಿ ಗ್ರಾಮದಲ್ಲಿ ಪ್ರತಿರೂಪದ ಅರಮನೆ ನಿರ್ಮಾಣಕ್ಕೆ ತಯಾರಿ ನಡೆಸಿದೆ‌.

ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ

ಈಗಾಗಲೇ ರಾಜ್ಯ ಸರ್ಕಾರ ಅರಮನೆ ನಿರ್ಮಾಣಕ್ಕೆ ಗ್ರಾಮದಲ್ಲಿ 57 ಎಕರೆ ಜಾಗವನ್ನು ಮೀಸಲಿಟ್ಟಿದೆ. ಅರಮನೆ ನಿರ್ಮಾಣಕ್ಕೆ ಸರ್ಕಾರಿ ಜಾಗವನ್ನು ಕಿತ್ತೂರು ಪ್ರಾಧಿಕಾರಕ್ಕೆ ನೀಡಲು ಉದ್ದೇಶಿಸಿದೆ. ಈ‌ ಬಗ್ಗೆ ಬೈಲಹೊಂಗಲ ಉಪವಿಭಾಗಾಧಿಕಾರಿಗೆ ಬೆಳಗಾವಿ ಜಿಲ್ಲಾಡಳಿತ ಪತ್ರ ಬರೆದಿದೆ‌. ಈ ಸಂಬಂಧ ಆಕ್ಷೇಪಗಳಿದ್ದರೆ, ಸಮರ್ಥ ಕಾರಣ ನೀಡಲು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ ಜಿಲ್ಲಾಡಳಿತ ಅವಕಾಶ ನೀಡಿದೆ‌. ಆದರೆ ಬಚ್ಚನಕೇರಿಯಲ್ಲಿ ಅರಮನೆ ನಿರ್ಮಾಣಕ್ಕೆ ಮುಂದಾಗಿರುವ‌ ಸರ್ಕಾರದ ಕ್ರಮಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರದ ಪ್ರತಿ

ಆ.2ರಂದು ಕಿತ್ತೂರು ಬಂದ್​​ಗೆ ಕರೆ: ಕಿತ್ತೂರು ತಾಲೂಕಿನ ಬಚ್ಚನಕೇರಿ ಗ್ರಾಮದಲ್ಲಿ ಕಿತ್ತೂರು ಕೋಟೆಯ ಪ್ರತಿರೂಪ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಬೆಳಗಾವಿ ಜಿಲ್ಲಾಡಳಿತದ ಕ್ರಮ ಖಂಡಿಸಿ ಆ.2ರಂದು ಕಿತ್ತೂರು ಬಂದ್​ಗೆ ಕರೆ ನೀಡಲಾಗಿದೆ. ಅಂದಿನ ಪ್ರತಿಭಟನೆಯಲ್ಲಿ ಐತಿಹಾಸಿಕ ಕಿತ್ತೂರು ಕೋಟೆಯ ಪ್ರತಿರೂಪದ ಅರಮನೆಯನ್ನು ಕಿತ್ತೂರು ಪಟ್ಟಣದಲ್ಲೇ ನಿರ್ಮಿಸಬೇಕು ಎಂದು ಆಗ್ರಹಿಸಲಾಗುತ್ತದೆ.

ಪತ್ರದ ಪ್ರತಿ

ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿ ಪಂಚಾಕ್ಷರಿ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಂದ್​​ಗೆ ಕರೆ ನೀಡಲಾಗಿದೆ. ನಿಚ್ಚಣಕಿಯ ಮಡಿವಾಳೇಶ್ವರ ಮಠದಿಂದ ಚೆನ್ನಮ್ಮ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ‌. ಬಳಿಕ ಬೆಳಗಾವಿಗೆ ಆಗಮಿಸಿ ಡಿಸಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಪ್ರತಿಭಟನೆಯಲ್ಲಿ 10 ಸಾವಿರಕ್ಕೂ ಅಧಿಕ ಜನರು ಸೇರುವಂತೆ ಸ್ವಾಮೀಜಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ:45.56 ಕೋಟಿ ರೂ. ವೆಚ್ಚದಲ್ಲಿ ಕಿತ್ತೂರು ಅರಮನೆ, ಕೋಟೆ ಸಂರಕ್ಷಣೆ: ಸಿಎಂ ಅನುಮೋದನೆ

ABOUT THE AUTHOR

...view details