ಬೆಳಗಾವಿ: ಇಲ್ಲಿನ ಜಾಧವ್ ನಗರದಲ್ಲಿ ಕಟ್ಟಡ ಕಾರ್ಮಿಕನ ಮೇಲೆ ದಾಳಿ ಮಾಡಿ ಗಾಲ್ಫ್ ಮೈದಾನಕ್ಕೆ ನುಗ್ಗಿದ ಚಿರತೆಯ ಚಲನವಲನಗಳು ಅರಣ್ಯ ಇಲಾಖೆ ಅಳವಡಿಸಿರುವ ಟ್ರ್ಯಾಪ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಕುರಿತು ಬೆಳಗಾವಿ ಡಿಎಫ್ಓ ಎಚ್.ಎಸ್.ಅಂಥೋನಿ ಚಿರತೆ ಇರುವ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.
ಆಗಸ್ಟ್ 5 ರಂದು ಬೆಳಗಾವಿಯ ಜಾಧವ್ ನಗರದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಕಟ್ಟಡ ಕಾರ್ಮಿಕ ಸಿದರಾಯಿ ಮಿರಜಕರ್ ಎಂಬುವವರ ಮೇಲೆ ದಾಳಿ ಮಾಡಿ ನಾಪತ್ತೆ ಆಗಿತ್ತು. ಕಟ್ಟಡ ಕಾರ್ಮಿಕನ ಮೇಲಿನ ಚಿರತೆ ದಾಳಿಯ ಸುದ್ದಿ ಕೇಳಿದ ಅವರ ತಾಯಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇದಾದ ಬಳಿಕ ಚಿರತೆ ಗಾಲ್ಫ್ ಮೈದಾನದಲ್ಲಿ ಕಂಡುಬಂದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರು.
ಇದಾದ ಬಳಿಕ ಕಳೆದ ನಾಲ್ಕು ದಿನಗಳಿಂದಲೂ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಜಂಟಿಯಾಗಿ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಿದ್ದರು. ಗಾಲ್ಫ್ ಮೈದಾನ ಬಳಿ ರಕ್ಷಣಾ ಇಲಾಖೆಗೆ ಸೇರಿದ 250 ಎಕರೆ ಪ್ರದೇಶದ ಅರಣ್ಯದಲ್ಲಿ ಚಿರತೆ ಮರೆಯಾಗಿದ್ದು, ಚಿರತೆ ಸೆರೆಗೆ ಗಾಲ್ಫ್ ಮೈದಾನದ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ 7 ಬೋನು, 16 ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಇದರ ಜೊತೆಗೆ ಗದಗ, ದಾಂಡೇಲಿ, ಭೀಮಗಡ ಅರಣ್ಯ ವಲಯದ ತಜ್ಞ ಸಿಬ್ಬಂದಿ ಕರೆಸಿ ಶೋಧಕಾರ್ಯ ನಡೆಸಿದ್ದಾರೆ.
ಸಾರ್ವಜನಿಕರಿಗೆ ಡಿಎಫ್ಓ ಮನವಿ ಡಿಎಫ್ಓ ಎಚ್.ಎಸ್.ಅಂಥೋನಿ ಪ್ರತಿಕ್ರಿಯಿಸಿ, "ಅರಣ್ಯ ಇಲಾಖೆಯ ಟ್ರ್ಯಾಪ್ ಕ್ಯಾಮೆರಾದಲ್ಲಿ ಕಳೆದ ರಾತ್ರಿ ಚಿರತೆ ಸೆರೆಯಾಗಿದೆ. ಗಾಲ್ಫ್ ಮೈದಾನದ ಪ್ರದೇಶದ ಒಳಗಡೆಯೇ ಓಡಾಡುತ್ತಿದೆ. ಚಿರತೆ ಸೆರೆ ಕಾರ್ಯಾಚರಣೆ ಮುಗಿಯುವವರೆಗೂ ಅರಣ್ಯ ಇಲಾಖೆ ಜೊತೆಗೆ ಸಾರ್ವಜನಿಕರು ಸಹಕರಿಸಬೇಕು. ಗಾಲ್ಫ್ ಮೈದಾನ ಬಳಿ ಸಾರ್ವಜನಿಕರು ಓಡಾಡಕೂಡದು" ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ :ಮಗನ ಮೇಲೆ ಚಿರತೆ ದಾಳಿ; ಸುದ್ದಿ ಕೇಳಿ ಹೃದಯಾಘಾತದಿಂದ ತಾಯಿ ಸಾವು