ಅಥಣಿ: ಕೊಟ್ಟ ಕುದುರೆ ಏರಲಾಗದವನು ಇನ್ನೊಂದು ಕುದುರೆ ಏರುತ್ತೇನೆ ಅನ್ನೋನು ವೀರನೂ ಅಲ್ಲ, ಶೂರನೂ ಅಲ್ಲ. ಡ್ಯಾಷ್ ಡ್ಯಾಷ್...ಕೂಡ ಅಲ್ಲ ಎಂದು ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಅನರ್ಹ ಶಾಸಕರ ಕುರಿತು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಪರವಾಗಿ ಮತಯಾಚಿಸುವ ಸಂದರ್ಭದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಈ ರೀತಿ ಲೇವಡಿ ಮಾಡಿದ್ರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಳಗಾವಿಯಲ್ಲಿ ಐವರನ್ನು ಮಂತ್ರಿ ಮಾಡುವುದಾಗಿ ಹೇಳಿದ್ದಾರೆ. ಐವರ ಬದಲಿಗೆ ಬೇಕಾದ್ರೆ 15 ಮಂದಿಗೂ ಸಚಿವ ಸ್ಥಾನ ಕೊಡಲಿ. ಆದರೆ, ಕುಮಠಳ್ಳಿಗೆ ಮಾತ್ರ ತಕ್ಕ ಪಾಠ ಕಲಿಸಿ ಎಂದು ಗುಡುಗಿದರು.
ಕುಮಠಳ್ಳಿ ಮಳ್ಳ ಮಳ್ಳ ಮಂಚಕ್ಕೆ ಎಷ್ಟು ಕಾಲು ಅಂದ್ರೆ ಮೂರು ಮತ್ತೊಂದು ಎನ್ನುವಂಥ ಮಳ್ಳನಂತಿದ್ದಾರೆ. 2013 ಹಾಗೂ 2018ರ ಚುನಾವಣೆಯಲ್ಲಿ ಟಿಕೆಟ್ ಕೊಡಿಸಲು ನಾನೂ ಸಹಾಯ ಮಾಡಿದ್ದೆ. ಒಳ್ಳೆಯವರು, ಸುಸಂಸ್ಕೃತರು ಅಂದಕೊಂಡಿದ್ದೆವು. ಆದರೆ, ಹೆತ್ತ ತಾಯಿಗೆ (ಕಾಂಗ್ರೆಸ್ ಪಕ್ಷಕ್ಕೆ) ದ್ರೋಹ ಮಾಡಿದ್ದಾರೆ ಎಂದು ಕಿಡಿಕಾರಿದರು.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಲು ಕುಡಿದ ಮಕ್ಕಳೇ ಬದುಕುತ್ತಿಲ್ಲ. ಇನ್ನೂ ವಿಷ ಕುಡಿದ ಇವರು ಬದುಕುತ್ತಾರಾ? ಜನ್ಮಕೊಟ್ಟ ತಾಯಿ ಒಬ್ಬರಿದ್ರೆ ಜಗತ್ತನ್ನು ತೋರಿಸಿದ ತಾಯಿ ನಮ್ಮ ಪಕ್ಷ. ಅಂತಹ ಪಕ್ಷಕ್ಕೆ ದ್ರೋಹ ಎಸಗಿದ್ದಾರೆ. ಅನುದಾನ ಕೊಡಲಿಲ್ಲ ಎಂಬ ಕಾರಣ ಹೇಳಿ ಪಕ್ಷ ಬಿಟ್ಟು ಹೋಗಿದ್ದಾರಂತೆ. ಲಕ್ಷ್ಮಿ ಹೆಬ್ಬಾಳ್ಕರ್ಗೆ ಕೊಟ್ಟಷ್ಟು ಅನುದಾನ ನಮಗೆ ಕೊಡಲಿಲ್ಲ ಎಂದು ಹೇಳಿದ್ದಾರೆ. ಅನುದಾನ ಕೇಳದೆ ಬಾಯಲ್ಲಿ ಕಡಬು ಇಟ್ಟುಕೊಂಡಿದ್ದರಾ? ಎಂದು ಪ್ರಶ್ನಿಸಿದರು.
ಮಂತ್ರಿಗಳ ಕೈ, ಕಾಲು ಹಿಡಿದು ಅನುದಾನ ಪಡೆಯಬಹುದಿತ್ತು. ನಾನು ಅನುದಾನ ತಂದಿದ್ದೇನೆ ಅಂತಾ ನಿಮಗ್ಯಾಕೆ ಹೊಟ್ಟೆ ಉರಿ? ಹೆಣ್ಣು ಮಗಳಾಗಿ ₹ 1,200 ಕೋಟಿ ಅನುದಾನ ತಂದಿದ್ದೇನೆ. ನೀವು ಗಂಡಸರಾಗಿ ಅನುದಾನ ತರಲು ಆಗಲಿಲ್ಲವೇ? ಇನ್ನೊಬ್ಬರು ಊಟ ಮಾಡಿದ್ದಾರೆ ಎಂದು ನಾವು ಉಪವಾಸ ಇರೋದು ತಪ್ಪು ಎಂದರು.
ಅನರ್ಹರದು ಅತೀ ವಿನಯಂ ಚೋರ ಲಕ್ಷಣಂ. ನನ್ನ ಮಾತು ಗುಂಡು ಹೊಡೆದಂಗೆ ಇರಬಹುದು. ಆದ್ರೆ ಯಾವತ್ತಿಗೂ ಸತ್ಯ. ಜಮಖಂಡಿಯಲ್ಲಿ ಆನಂದ ನ್ಯಾಮಗೌಡರ, ಕುಂದಗೋಳದಲ್ಲಿ ಕುಸುಮಾ ಶಿವಳ್ಳಿ, ಗುಂಡುಪ್ಲೇಟೆಯಲ್ಲಿ ಗೀತಾ ಮಹಾದೇವ ಪ್ರಸಾದರನ್ನು ಗೆಲ್ಲಿಸಲು ಸಹಾಯ ಮಾಡಿದ್ದೆ. ಈಗ ಗಜಾನನ ಮಂಗಸೂಳಿ ಅವರನ್ನು ಗೆಲ್ಲಿಸಬೇಕಿದೆ ಎಂದು ಮನವಿ ಮಾಡಿಕೊಂಡರು.