ಬೆಳಗಾವಿ: ಜಿಲ್ಲೆಯ ಹಾಟ್ ಸ್ಪಾಟ್ ಕೇಂದ್ರವಾಗಿರುವ ಹಿರೇಬಾಗೆವಾಡಿ ಸೀಲ್ ಡೌನ್ ಆಗಿದ್ದು, ಇಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತರಕಾರಿ ಹಾಗೂ ದಿನಸಿ ವ್ಯವಸ್ಥೆ ಮಾಡಿದ್ದಾರೆ.
ಸೀಲ್ ಡೌನ್ ಆಗಿರುವ ಹಿರೇಬಾಗೇವಾಡಿ ಜನರಿಗೆ ತರಕಾರಿ-ದಿನಸಿ ವ್ಯವಸ್ಥೆ ಮಾಡಿದ ಲಕ್ಷ್ಮಿ ಹೆಬ್ಬಾಳ್ಕರ್! ಈ ಹಿಂದೆ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೇಬಾಳ್ಕರ್ ಭೇಟಿ ನೀಡದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದರಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಹೆಬ್ಬಾಳ್ಕರ್ ನಡೆಗೆ ಎಲ್ಲೆಡೆ ಆಕ್ರೋಶವೂ ವ್ಯಕ್ತವಾಗಿತ್ತು. ಏಕಾಏಕಿ ಹೆಬ್ಬಾಳ್ಕರ್ ಹಿರೇಬಾಗೇವಾಡಿ ಗ್ರಾಮಕ್ಕೆ ಭೇಟಿ ನೀಡಿ, 20 ಟನ್ ತರಕಾರಿ-ಆಹಾರ ಪದಾರ್ಥಗಳನ್ನು ವಿತರಿಸುವುದಾಗಿ ತಿಳಿಸಿದ್ದಾರೆ.
ಹಿರೇಬಾಗೇವಾಡಿ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಕಿರೀಟದಂತಿದೆ. 25 ಸೋಂಕಿತರು ಪತ್ತೆಯಾಗಿರುವ ಕಾರಣ ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದೆ. ಇದು ಸಜ್ಜನರ, ಬುದ್ಧಿವಂತರ ಊರು. ಆದರೆ ದುರದೃಷ್ಟವಶಾತ್ ಗ್ರಾಮದಲ್ಲಿ ಕೊರೊನಾ ಸೋಂಕು ಬಂದು ಜನಜೀವನವನ್ನೇ ಜರ್ಜರಿತಗೊಳಿಸಿದೆ. ಆದರೆ, ಗ್ರಾಮದ ಜನರು ಧೈರ್ಯ ಕಳೆದುಕೊಳ್ಳುವುದು ಬೇಡ. ನಾನು ನಿಮ್ಮೊಂದಿಗಿದ್ದೇನೆ. ನಿಮ್ಮ ಸಂಕಷ್ಟದಲ್ಲಿ ಭಾಗಿಯಾಗಿದ್ದೇನೆ ಎಂದು ಹೆಬ್ಬಾಳ್ಕರ್ ಅಭಯ ನೀಡಿದ್ದಾರೆ.
ತರಕಾರಿಗಳನ್ನು ಬೆಳೆದ ರೈತರಿಂದಲೇ ನೇರವಾಗಿ ಖರೀದಿಸಿ ತಂದಿದ್ದೇವೆ. ಬೆಳೆದವರಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಕಂಗಾಲಾಗಿದ್ದರು. ಹಾಗಾಗಿ ಅವರಿಗೂ ಸಹಾಯ ಮಾಡುವ ಪ್ರಯತ್ನ ಮಾಡಿದ್ದೇನೆ. ಜೊತೆಗೆ ತರಕಾರಿ ಖರೀದಿಸಲಾಗದೇ ಮನೆಯೊಳಗೆ ಬಂಧಿಯಾಗಿರುವ ಜನರಿಗೂ ಅಳಿಲು ಸೇವೆ ಸಲ್ಲಿಸುವ ಸಂಕಲ್ಪ ಮಾಡಿದ್ದೇನೆ. ನಾಳೆ ಆಹಾರ ಧಾನ್ಯಗಳನ್ನು ವಿತರಿಸುತ್ತೇನೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.