ಬೆಳಗಾವಿ/ಅಥಣಿ: ಅಥಣಿ ಮಿನಿ ವಿಧಾನಸೌಧದಲ್ಲಿರುವ ಹಿರಿಯ ಉಪ ನೋಂದಣಾಧಿಕಾರಿ ಹಾಗೂ ವಿವಾಹ ನೋಂದಣಿ ಅಧಿಕಾರಿಗಳ ಕಾರ್ಯಾಲಯ ಅವ್ಯವಸ್ಥೆಯ ಆಗರವಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
ಅಥಣಿ ಮಿನಿ ವಿಧಾನಸೌಧದಲ್ಲಿರುವ ಹಿರಿಯ ಉಪ ನೋಂದಣಾಧಿಕಾರಿ ಕಚೇರಿ ದಿನನಿತ್ಯ ನೂರಾರು ರೈತರು, ಜನಸಾಮಾನ್ಯರು ಜಮೀನು ಹಾಗೂ ವಿವಾಹಕ್ಕೆ ಸಂಬಂಧಿಸಿದ ಕಾರ್ಯಗಳಿಗಾಗಿ ಇಲ್ಲಿಗೆ ಆಗಮಿಸುತ್ತಾರೆ. ಆದರೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಜನ ಸಾಮಾನ್ಯರು ಪರದಾಡುವಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಶಾಸಕ ಮಹೇಶ್ ಕುಮಟಳ್ಳಿ ಕ್ಷೇತ್ರದಲ್ಲಿ ತಾಲೂಕು ಆಡಳಿತದ ಅವ್ಯವಸ್ಥೆಯಿಂದಾಗಿ ಮಹಿಳೆಯರು ಕಚೇರಿ ಬಾಗಿಲ ಮುಂಭಾಗ ಕುಳಿತು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ದೂರದ ಊರಿನಿಂದ ಬಂದ ಜನರು ಸತತ ಎಂಟು ಗಂಟೆ ಕಳೆದರೂ ಕೂಡ ಕೆಲಸವಾಗದಿರುವುದಕ್ಕೆ ಹೈರಾಣಾಗಿ ಹೋಗುತಿದ್ದಾರೆ. ಜೊತೆಗೆ ಕಚೇರಿಯ ಮುಂಭಾಗದಲ್ಲಿ ಸರಿಯಾದ ಆಸನಗಳ ವ್ಯವಸ್ಥೆ ಸಹ ಇಲ್ಲ ಎನ್ನುವ ಆರೋಪಗಳು ಕೇಳಿಬಂದಿವೆ.
ರೈತ ಮುಖಂಡ ಎಂ.ಸಿ ತಾಂಬೋಳೆ ಮಾತನಾಡಿ, ಕಳೆದ ಎರಡು ವರ್ಷಗಳಿಂದ ನೋಂದಣಿ ಕಚೇರಿಯಲ್ಲಿ ಅನಾನುಕೂಲ ವಾತಾವರಣ ನಿರ್ಮಾಣವಾಗಿದೆ. ಯಾವುದಾದರು ಒಂದು ಕುಂಟು ನೆಪ ಹೇಳಿಕೊಂಡು ರೈತರನ್ನು ಸತಾಯಿಸುತ್ತಿದ್ದಾರೆ. ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು, ಈ ಕುರಿತು ನೋಂದಣಿ ಅಧಿಕಾರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಇದೇ ರೀತಿ ಮುಂದುವರೆದರೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಕುರಿತು ಹಿರಿಯ ನೋಂದಣಾಧಿಕಾರಿ ಧನರಾಜ್ ಟಿ ಅವರನ್ನು ಕೇಳಿದ್ರೆ, ಕಳೆದ ಒಂದು ವಾರದಿಂದ ನೆಟ್ವರ್ಕ್ ಸಮಸ್ಯೆ ಇರುವುದರಿಂದ ಈ ರೀತಿಯ ಸಮಸ್ಯೆ ಉಂಟಾಗಿದೆ. ಇನ್ಮುಂದೆ ಮಹಿಳೆಯರಿಗೆ ಸೂಕ್ತ ಆಸನದ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.