ಬೆಳಗಾವಿ :ಅನ್ನದಾತನ ರಕ್ಷಣೆ ಹಾಗೂ ಕೃಷಿಯನ್ನು ಎಲ್ಲಿಯವರೆಗೂ ಗೌರವಿಸುತ್ತೇವೆಯೋ ಅಲ್ಲಿಯವರೆಗೆ ಮಾತ್ರ ಸ್ವಾವಲಂಬಿ ಭಾರತ ಕಾಣಲು ಸಾಧ್ಯ ಎಂದು ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.
ಅಧಿಕಾರಿಗಳೊಂದಿಗೆ ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ಸಭೆ ನಗರದ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ 14ನೇ ವಾರ್ಷಿಕ ಸರ್ವಸಾಧಾರಣ ಮಹಾಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಬೇಕಿದೆ.
ಹೀಗಾಗಿ ಒಂದೇ ಸೂರಿನಡಿ ಕಬ್ಬು ಮತ್ತು ಇತರೆ ಎಲ್ಲ ಬೆಳೆ ಬೆಳೆಯಲು ರೈತರಿಗೆ ಮಾರ್ಗದರ್ಶನ ನೀಡುವ ಸಂಸ್ಥೆ ಇದಾಗಬೇಕು ಎಂಬ ಉದ್ದೇಶದಿಂದ ಕೃಷಿ ವಿಸ್ತರಣಾ ಶಿಕ್ಷಣ ಘಟಕ ಆರಂಭಿಸಿದ್ದೇವೆ ಎಂದರು.
ಮಂಡ್ಯದಲ್ಲಿ 2011ರಲ್ಲಿ ಸ್ಥಾಪಿಸಿದ್ದ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಕಬ್ಬು ಸಂಶೋಧನಾ ಸಂಸ್ಥೆಯನ್ನು ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯೊಂದಿಗೆ ವಿಲೀನ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಈ ಪ್ರಕ್ರಿಯೆಯಿಂದ ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ರಾಜ್ಯಮಟ್ಟದ ಸಂಸ್ಥೆಯಾಗಿ, ರಾಜ್ಯದ ಉತ್ತರ ಮತ್ತು ದಕ್ಷಿಣ ಭಾಗದ ಕಬ್ಬು ಬೆಳೆ ಹಾಗೂ ಸಕ್ಕರೆ ಉದ್ದಿಮೆಗೆ ಸಂಬಂಧಿಸಿದ ಸಂಶೋಧನಾ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯಕವಾಗಲಿದೆ.
ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಬೆಳಗಾವಿಯಿಂದ ರೈತರ ತಾಂತ್ರಿಕ ಮಾರ್ಗದರ್ಶನಕ್ಕಾಗಿ ಕೃಷಿ ವಿಶ್ವವಿದ್ಯಾಲಯ ಧಾರವಾಡದೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಪ್ರಾರಂಭಿಸಲಾಗಿದೆ. ಇದರಿಂದ ಈ ಭಾಗದ ರೈತರಿಗೆ ಕಬ್ಬು ಹಾಗೂ ಇತರ ಕೃಷಿ ಚಟುವಟಿಕೆಗಳ ಮಾಹಿತಿಯನ್ನು ಸಂಸ್ಥೆಯ ಆವರಣದಲ್ಲಿ ಪಡೆಯಲು ಸಾಧ್ಯವಾಗಲಿದೆ ಎಂದರು.
ಓದಿ:ನನಗೆ ಸಚಿವ ಸ್ಥಾನ ನೀಡಿಲ್ಲ ಎಂಬುವುದು ಬೇಸರ, ನಾನೂ ಸಚಿವ ಸ್ಥಾನದ ಆಕಾಂಕ್ಷಿ.. ಕುಮಟಳ್ಳಿ
ರಾಜ್ಯದ ಉತ್ತಮ ತಾಂತ್ರಿಕ ಕಾರ್ಯದಕ್ಷತೆ ಪ್ರಶಸ್ತಿಗೆ ನಿಪ್ಪಾಣಿಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ಉತ್ತಮ ಕಾರ್ಯದಕ್ಷತೆ ಚಿಕ್ಕೋಡಿಯ ಚಿದಾನಂದ ಬಸವಪ್ರಭು ಸಹಕಾರಿ ಸಕ್ಕರೆ ಕಾರ್ಖಾನೆ ಆಯ್ಕೆ ಆಗಿದೆ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ 9 ಸಕ್ಕರೆ ಕಾರ್ಖಾನೆಗಳಿಗೆ ತಾಂತ್ರಿಕ ಕಾರ್ಯಕ್ಷಮತೆಯ ಪ್ರಶಸ್ತಿ ಪ್ರದಾನ ಮಾಡಲಾಯಿತು.