ಬೆಳಗಾವಿ : ನಮ್ಮ ಪಕ್ಷಕ್ಕೆ ಬಂದವರು ಪೂರ್ಣ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ ಎಂದು ನಾನು ಹೇಳಲ್ಲ. ಯಾವುದೋ ಒಬ್ಬ ವ್ಯಕ್ತಿ ಬಿಜೆಪಿಗೆ ಸೇರುವ ವೇಳೆ ಅವರು ಸ್ಥಾನಮಾನಕ್ಕಾಗಿಯೇ ಬಂದಿರಬಹುದು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಸೂಚ್ಯವಾಗಿ ವಲಸಿಗರಿಗೆ ಟಾಂಗ್ ನೀಡಿದ್ದಾರೆ.
ವಲಸಿಗರ ಕುರಿತು ಸಚಿವ ಈಶ್ವರಪ್ಪ ಹೇಳಿಕೆ ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಬೆಳಗಾವಿ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸುತ್ತಾ, ಸ್ಥಾನಮಾನಕ್ಕಾಗಿ ಅಥವಾ ಪ್ರಧಾನಿ ಮೋದಿ ಸಾಧನೆ ನೋಡಿ ಬಿಎಜಪಿಗೆ ಬಂದಿರಬಹುದು. ಅವರೆಲ್ಲೂ ಸಂಪೂರ್ಣವಾಗಿ ನಿಷ್ಠಾವಂತರು ಎಂದು ಹೇಳಲ್ಲ. ನಮ್ಮ ಸಿದ್ಧಾಂತ ಒಪ್ಪಿ ಎಲ್ಲಾ ರೂಪದ ಜನ ಪಕ್ಷಕ್ಕೆ ಬಂದಿದ್ದಾರೆ. ಫಲಿತಾಂಶದಿಂದ ಮುಜುಗರ ಆಗಿದೆ, ಆಗಿಲ್ಲ ಎಂಬುದು ಒಬ್ಬ ವ್ಯಕ್ತಿಯ ಮೇಲೆ ಅವಲಂಬಿಸಿರುತ್ತದೆ. ಇದನ್ನು ಬರೀ ಬೆಳಗಾವಿಗೆ ಮಾತ್ರ ಹೋಲಿಕೆ ಮಾಡುತ್ತಿಲ್ಲ. ಇಡೀ ದೇಶದಲ್ಲೇ ಎಂತೆಂಥವರು ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಬಂದವರಲ್ಲಿ ತುಂಬಾ ಜನ ಒಳ್ಳೆಯವರಾಗಿದ್ದಾರೆ ಎಂದು ವಿವರಿಸಿದರು.
ರಮೇಶ್ ಬಗ್ಗೆ ನನ್ನ ಬಾಯಿಂದ ಆ ಮಾತನ್ನು ಹೇಳಿಸಬೇಡಿ :ಕೆಲ ಜನ ನಮ್ಮಲ್ಲಿ ವರ್ಕೌಟ್ ಆಗಲ್ಲ. ನನ್ನ ವ್ಯವಹಾರವೇ ಬೇರೆ ಎಂದು ಪಕ್ಷ ತೊರೆದವರೂ ಇದ್ದಾರೆ. ಪಕ್ಷದಿಂದ ಕಿತ್ತು ಹಾಕಿದ ಪ್ರಕರಣವೂ ಇದೆ ಎಂದ ಸಚಿವ ಕೆ.ಎಸ್.ಈಶ್ವರಪ್ಪ, ಹಾಗಾದರೆ ರಮೇಶ್ ಜಾರಕಿಹೊಳಿ ವಿರುದ್ಧ ಕ್ರಮ ಆಗುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಆ ಮಾತನ್ನು ನಾನು ಹೇಳಿಲ್ಲ. ನನ್ನ ಬಾಯಲ್ಲಿ ಅದನ್ನು ಹೇಳಿಸಬೇಡಿ. ನಾನು ಆ ಸಂದೇಶ ಕೊಟ್ಟಿಲ್ಲ. ಬಿಜೆಪಿ ಮಾಸ್ ಪಾರ್ಟಿಯಾಗಿ ಬೆಳೆಯುವ ಈ ಸಂದರ್ಭದಲ್ಲಿ ಸ್ವಲ್ಪ ಸಮಸ್ಯೆ ಇದೆ. ಅದನ್ನು ಬಿಗಿ ಮಾಡಿಕೊಂಡು ಹೋಗುತ್ತೇವೆ ಎಂದರು.
ಗುತ್ತಿಗೆದಾರರ ಪತ್ರ ಸಂವಿಧಾನ ಅಲ್ಲ : ಬಿಜೆಪಿ ಪರ್ಸೆಂಟೇಜ್ ಸರ್ಕಾರ ಎಂಬ ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ, ಯಾರಿಗೆ ಯಾವುದರ ಬಗ್ಗೆ ಆಸಕ್ತಿ ಇದೆಯೋ ಅದರ ಬಗ್ಗೆ ಹೆಚ್ಚಿನ ಒಲವು ತೋರಿಸುತ್ತಾರೆ. ಎಷ್ಟು ಪರ್ಸೆಂಟೇಜ್ ಏನು ಎಂಬ ಬಗ್ಗೆ ಸದನದಲ್ಲಿ ಚರ್ಚೆ ನಡೆಸಲಿ. ಸರ್ಕಾರನೂ ಉತ್ತರ ಕೊಡುತ್ತದೆ. ಅವರ ಕಾಲದಲ್ಲಿ ಏನೇನು ಆಗಿದೆ, ನಮ್ಮ ಕಾಲದಲ್ಲಿ ಏನೇನು ಆಗಿದೆ, ಯಾರ ಮೂಲಕ ತನಿಖೆ ಆಗಬೇಕು ಎಂಬುದನ್ನು ಚರ್ಚಿಸೋಣ. ಗುತ್ತಿಗೆದಾರರ ಸಂಘದವರು ಪತ್ರ ಬರೆದಿದ್ದಾರೆ ಅಂದರೆ ಅದೇ ಸಂವಿಧಾನ ಅಲ್ಲ. ಚಾರ್ಜ್ ಶೀಟ್ ಅಲ್ಲ, ಎಫ್ ಐಆರ್ ಅಲ್ಲ. ಪತ್ರ ಬರೆದಿದ್ದಾರೆ, ಅದನ್ನು ಇಟ್ಟುಕೊಂಡು ನಾವು ಬದುಕಿದ್ದೇವೆ ಎಂದು ತೋರಿಸಲು ಮಾಡುವಂತಿರುವ ನಾಟಕ ಇದು. ಬೇರೆ ಏನು ಅಲ್ಲ ಇದು ಎಂದು ಕುಹಕವಾಡಿದರು.
ತಪ್ಪಿಸಿಕೊಂಡ ಕಳ್ಳ ಸಿಗಲೇಬೇಕು : ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಇದನ್ನು ನ್ಯಾಯಾಂಗ ತನಿಖೆ ಮಾಡಬೇಕಾ, ಸು.ಕೋರ್ಟ್ ನ್ಯಾಯಮೂರ್ತಿ ಮೂಲಕ ತನಿಖೆ ಮಾಡಬೇಕಾ ನೋಡೋಣ. ನಮಗೆ ಯಾವುದೇ ಭಯ ಇಲ್ಲ. ಸಿಎಂ ಇದಕ್ಕೆ ಉತ್ತರ ಕೊಡುತ್ತಾರೆ. ತನಿಖೆ ಆದಾಗ ಕಾಂಗ್ರೆಸ್ನವರೇ ಸಿಲುಕಿ ಹಾಕಿಕೊಳ್ಳುತ್ತಾರೆ. ಅವರ ಕಾಲದಲ್ಲಿ ಆಗಿದ್ದ ಭ್ರಷ್ಟಾಚಾರ ಹೊರಬರಲಿದೆ. ಕಳ್ಳ ತಪ್ಪಿಸಿಕೊಂಡು ಓಡಿ ಹೋಗಿರಬಹುದು. ಯಾವತ್ತಾದರೂ ಸಿಕ್ಕಿ ಹಾಕಿಕೊಳ್ಳ ಹಾಕಬೇಕಲ್ಲಾ, ಹಂಗೆ ಆಗುತ್ತೆ ಇದು ಎಂದರು.
ತನಿಖೆ ಆದರೆ ಕಾಂಗ್ರೆಸ್ ನವರಿಗೇ ತಿರುಗುಬಾಣ: ಕಾಂಗ್ರೆಸ್ ತನಿಖೆಗೆ ಆಗ್ರಹಿಸುತ್ತಿರುವುದಕ್ಕೆ ಸ್ವಾಗತ ಮಾಡುತ್ತೇನೆ. ತನಿಖೆ ಆದರೆ ಕಾಂಗ್ರೆಸ್ ಎಷ್ಟು ಪರ್ಸೆಂಟ್ ಯಾರು ತಗೊಂಡಿದ್ದಾರೆ ಎಂಬುದು ಗೊತ್ತಾಗಲಿದೆ. ಕಾಂಗ್ರೆಸ್ ನವರಿಗೆ ಇದರಿಂದ ಶಿಕ್ಷೆ ಆಗಲಿದೆ. ಅವರಿಗೇ ಇದು ತಿರುಗು ಬಾಣವಾಗಲಿದೆ ಎಂದು ಟಾಂಗ್ ಕೊಟ್ಟರು.
ಬಿಜೆಪಿಯಲ್ಲಿ ಒಂದೇ ಒಂದು ಪರ್ಸೆಂಟ್ ಇಲ್ಲ. ಪತ್ರದಲ್ಲಾದರೂ ಕೂಡ ಯಾವುದಾದರು ಇಲಾಖೆ ಇಂಥ ಯೋಜನೆಗೆ, ಇಂಥ ವ್ಯಕ್ತಿಗೆ ಹಣ ಕೊಟ್ಡಿದ್ದಾರೆ ಎಂದರೆ ಹೇಳಿದ್ದಾರೆ ಅಂದರೆ ಅದು ಬೇರೆ ವಿಚಾರ ಎಂದು ತಿಳಿಸಿದರು.