ಚಿಕ್ಕೋಡಿ:ಕೊರೊನಾ ಮಹಾಮಾರಿಯಿಂದ ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಈ ಮಧ್ಯೆ ಈ ಪ್ರವಾಹ ಬಂದು ನದಿ ತೀರದ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಸೂಕ್ತ ಪರಿಹಾರ ನೀಡಿ: ಕೃಷ್ಣಾ ನದಿ ತೀರದ ನೆರೆ ಸಂತ್ರಸ್ತರ ಅಳಲು ಕೃಷ್ಣಾ ನದಿ ತೀರದ ಜನರ ಜೀವನ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಕೃಷ್ಣೆಯ ಅಬ್ಬರಕ್ಕೆ ತತ್ತರಿಸಿದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮಸ್ಥರ ಗೊಳು ಕೇಳುವವರು ಯಾರು? ಎಂಬುವುದು ಅಲ್ಲಿಯ ಜನರ ಪ್ರಶ್ನೆಯಾಗಿದೆ. ಮಾಂಜರಿ ಗ್ರಾಮ ಅಷ್ಟೇ ಅಲ್ಲ, ತಾಲೂಕಿನ ಕೃಷ್ಣಾ, ದೂದಗಂಗಾ, ವೇದಗಂಗಾ ಮತ್ತು ಪಂಚಗಂಗಾ ನದಿ ತೀರದ ನೆರೆ ಸಂತ್ರಸ್ತರನ್ನ ಕಡೆಗಣನೆ ಮಾಡಲಾಗುತ್ತಿದೆ ಎಂದು ಇಲ್ಲಿ ಜನರು ಆರೋಪಿಸಿದ್ದಾರೆ.
ಪ್ರವಾಹದಿಂದ ಅಪಾರ ಹಾನಿಯಾಗಿ ಸಾವು - ನೋವು ಸಂಭವಿಸಿದರೂ, ಯಾವುದೇ ಅಧಿಕಾರಿಗಳಾಗಲಿ, ಜನ ಪ್ರತಿನಿಧಿಗಲಾಗಲಿ ಈವರೆಗೂ ಗ್ರಾಮಗಳಿಗೆ ಭೇಟಿ ನೀಡಿ ಜನರ ಕಷ್ಟ ಆಲಿಸಿಲ್ಲ. ಜನರಿಗೆ ಸಮಸ್ಯೆ ಬಂದಾಗ, ತಾಲೂಕು ಹಾಗೂ ಜಿಲ್ಲಾಡಳಿತ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು. ಆದರೆ, ಇಲ್ಲಿ ವಿಫಲವಾಗಿದೆ. ಇದ್ದರಿಂದ ಸಂತ್ರಸ್ತರು ತೊಂದರೆ ಅನುಭವಿಸುವಂತಾಗಿದ್ದು, ಸರ್ಕಾರದ ಬೇಜವಾಬ್ದಾರಿ ಧೋರಣೆ ಖಂಡಿಸಿ ತಕ್ಷಣ ಚಿಕ್ಕೋಡಿ ತಾಲೂಕಿಗೆ ಸಿಎಂ ಬರಬೇಕು ಎಂದು ಪಟ್ಟು ಹಿಡಿದಿದ್ದಾರೆ.
ನೂತನ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿರುವ ಬೊಮ್ಮಾಯಿ ಅವರು ತಮ್ಮ ಪಕ್ಷ ಸಂಘಟನೆ, ಮಂತ್ರಿಮಂಡಲ ರಚನೆ, ದೆಹಲಿ ಟೂರ್ ಎಂದು ಸಮಯ ವ್ಯರ್ಥ ಮಾಡುತ್ತಿದ್ದಾರೆ. ಪ್ರವಾಹ ಸಂತ್ರಸ್ತರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕಿದ್ದು, ಸೂಕ್ತ ಪರಿಹಾರ ಒದಗಿಸಿ ಎಂದು ಅಳಲು ತೋಡಿಕೊಂಡಿದ್ದಾರೆ.