ಬೆಳಗಾವಿ: ನಾವು ಜಾತಿ ಮೇಲಲ್ಲ, ನೀತಿ ಮೇಲೆ ರಾಜಕಾರಣ ಮಾಡುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತರು ನಮ್ಮವರೇ, ಮರಾಠರು ನಮ್ಮ ಅಣ್ಣ-ತಮ್ಮಂದಿರಂತೆ. ನಮಗೆ ಎಲ್ಲರೂ ಒಂದೇ. ಬಿಜೆಪಿಯವರೇ ಅವರನ್ನು ಬೇರೆಬೇರೆ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಹಕ್ಕು ಹೊಂದಿರುವ ಎಲ್ಲರೂ ಒಂದೇ. ನಾವೂ ಜಾತಿ ಮೇಲೆ ರಾಜಕಾರಣ ಮಾಡಲ್ಲ, ನೀತಿ ಮೇಲೆ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಬೆಂಬಲಿಸುವಂತೆ ಕೋರಿ ಕಮ್ಯೂನಿಷ್ಟ್ ಪಕ್ಷಗಳ ನಾಯಕರು, ರೈತ ಸಂಘಟನೆಗಳ ಸಂಪರ್ಕಿಸುತ್ತಿದ್ದೇನೆ. ಸತೀಶ್ ಜಾರಕಿಹೊಳಿಗೆ ಬೆಂಬಲ ನೀಡುವುದಾಗಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
'ರೈತರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ'
ದೆಹಲಿಯಲ್ಲಿ ನೂರಾರು ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ನೀತಿ ಬಗ್ಗೆ ರೈತರಿಗೆ ಆಕ್ರೋಶವಿದೆ. ಮಸ್ಕಿ, ಬೆಳಗಾವಿ ಹಾಗೂ ಬಸವಕಲ್ಯಾಣದಲ್ಲಿ ರೈತರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಇದನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಬೆಂಬಲಿಸುವಂತೆ ಕೋರಿದ್ದೇವೆ ಎಂದು ತಿಳಿಸಿದರು.