ಸುವರ್ಣಸೌಧ(ಬೆಳಗಾವಿ):ವಿಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ಸದಸ್ಯರ ತೀವ್ರ ಪ್ರತಿಭಟನೆ, ಪ್ರತಿರೋಧದ ಮಧ್ಯೆಯೇ ಮತಾಂತರ ನಿಷೇಧ ವಿಧೇಯಕ (ಕರ್ನಾಟಕ ಧಾರ್ಮಿಕ ಸ್ವಾತಂತ್ಯ ಹಕ್ಕು ಸಂರಕ್ಷಣಾ ವಿಧೇಯಕ-2021) ವಿಧಾನಸಭೆಯಲ್ಲಿಂದು ಅಂಗೀಕಾರಗೊಂಡಿತು.
ಮತಾಂತರ ನಿಷೇಧ ವಿಧೇಯಕ ಅಂಗೀಕಾರ ಮಾಡದಂತೆ ಪ್ರತಿಪಕ್ಷ ಕಾಂಗ್ರೆಸ್-ಜೆಡಿಎಸ್ ಸದಸ್ಯರು ಬಾವಿಗಳಿದು ಧರಣಿ ನಡೆಸಿದರು. ಆಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಧ್ವನಿಮತಗಳ ಮೂಲಕ ವಿಧೇಯಕ ಅಂಗೀಕಾರ ಮಾಡುವುದಾಗಿ ತಿಳಿಸಿದರು. ಅದಕ್ಕೆ ಬಿಜೆಪಿ ಸದಸ್ಯರು ಬೆಂಬಲ ಸೂಚಿಸಿ ಸದನದಲ್ಲಿ ವಿಧೇಯಕ ಅಂಗೀಕಾರ ಪಡೆದುಕೊಂಡರು. ಪ್ರತಿಪಕ್ಷ ಸದಸ್ಯರು ಪ್ರತಿಭಟನೆ ಮುಂದುವರಿಸಿದ್ದಕ್ಕೆ ಸ್ಪೀಕರ್ ಕಾಗೇರಿ ಕಲಾಪವನ್ನು 10 ನಿಮಿಷ ಮುಂದೂಡಿದರು.
ಚಳಿಗಾಲ ಅಧಿವೇಶನ ಕೊನೆಯ ದಿನವಾದ ನಾಳೆ ಕರ್ನಾಟಕ ಧಾರ್ಮಿಕ ಸ್ವಾತಂತ್ಯ ಹಕ್ಕು ಸಂರಕ್ಷಣಾ ವಿಧೇಯಕ-2021 ಪರಿಷತ್‍ನಲ್ಲಿ ಮಂಡಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.
ಬಿಲ್ ಹಿಂದೆ ಆರ್‌ಎಸ್‍ಎಸ್ ಕೈವಾಡ:
ಕರ್ನಾಟಕ ಧಾರ್ಮಿಕ ಸ್ವಾತಂತ್ಯ ಹಕ್ಕು ಸಂರಕ್ಷಣಾ ವಿಧೇಯಕ-2021 ಜಾರಿಯ ಹಿಂದೆ ಕಾಣದ ಕೈಗಳ ಕೈವಾಡ ಇದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೆಳಗ್ಗೆಯಿಂದಲೇ ಪ್ರತಿಪಾದಿಸುತ್ತ ಬಂದಿದ್ದರು.
ಭೋಜನ ವಿರಾಮದ ನಂತರ ದಾಖಲೆ ಸಮೇತ ಚರ್ಚೆ ಆರಂಭಿಸಿದ ಸಿದ್ದರಾಮಯ್ಯ, 2009ರಲ್ಲಿ ಬಿ.ಎಸ್. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ಆಗ ಬಿಜೆಪಿ ಬೆಂಬಲಿತ ಚಿಂತಕರು ಬಿಎಸ್‍ವೈಗೆ ಮನವಿ ಸಲ್ಲಿಸಿ, ಮಧ್ಯಪ್ರದೇಶ ಮಾದರಿಯಲ್ಲಿ ಮತಾಂತರ ನಿಷೇಧ ವಿಧೇಯಕ ಜಾರಿಗೆ ತರುವಂತೆ ಕೋರಿದ್ದರು. ಮಧ್ಯಪ್ರದೇಶ ತೆಗೆದು ಕರ್ನಾಟಕ ಎಂದು ಸೇರಿಸಿದರೆ ಸಾಕು ಎಂದು ಮನವಿ ಪತ್ರದಲ್ಲೇ ಉಲ್ಲೇಖಿಸಲಾಗಿತ್ತು ಎಂದು ದೂರಿದರು. ಹೀಗಾಗಿ ಮತಾಂತರ ನಿಷೇಧ ವಿಧೇಯಕ ಜಾರಿಯ ಹಿಂದೆ ಆರ್‌ಎಸ್‍ಎಸ್ ಕೈವಾಡ ಇದೆ ಎಂದು ಆರೋಪಿಸಿದರು. ಇಂಥ ಅಮಾನವೀಯ ಕಾನೂನು ಜಾರಿಗೆಗೆ ನಮ್ಮ ವಿರೋಧ ಎಂದು ಕುಟುಕಿದರು.
ಮನವಿ ಬಂದಿದ್ದು ನಿಜ ಎಂದ ಬಿಎಸ್‍ವೈ
ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಬಿಎಸ್‍ವೈ, ಹೌದು, ಸಿದ್ದರಾಮಯ್ಯ ಮಾಡುತ್ತಿರುವ ಆರೋಪ ನೂರಕ್ಕೆ ನೂರರಷ್ಟು ಸತ್ಯವಿದೆ. 2009ರಲ್ಲೇ ಕೆಲ ಚಿಂತಕರು ನನಗೆ ಮನವಿ ಸಲ್ಲಿಸಿದ್ದು ನಿಜ. ಆಗಿನಿಂದಲೂ ಈ ವಿಧೇಯಕ ಜಾರಿಗೆ ತರಲು ನಾವು ಚಿಂತನೆ ನಡೆಸುತ್ತಿದ್ದೇವೆ. ಆದರೆ ಸಿದ್ದರಾಮಯ್ಯನವರು ಕೂಡ 2016ರಲ್ಲಿ ಈ ಕಾನೂನು ಜಾರಿಗೆಗೆ ಡ್ರಾಪ್ ಸಿದ್ದಪಡಿಸಲು ಸೂಚಿಸಿ, ಸಹಿ ಕೂಡ ಮಾಡಿದ್ದರು.