ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದ ಸುಪ್ರೀಂಕೋರ್ಟ್‍ನಲ್ಲಿದ್ದರೂ ಮಹಾರಾಷ್ಟ್ರ ಮಾತ್ರ ಈ ವಿವಾದದ ಬೆಂಕಿಗೆ ತುಪ್ಪ ಸುರಿಯುವ ಯತ್ನ ನಿರಂತರವಾಗಿ ಮಾಡುತ್ತಲೇ ಇದೆ. ಮಹಾರಾಷ್ಟ್ರ ನಾಯಕರ ನಿರಂತರ ಪ್ರಚೋದನಾತ್ಮಕ ಹೇಳಿಕೆ ನೀಡುತ್ತಿದ್ದರೂ, ಗಡಿವಿವಾದ ವಿಚಾರದಲ್ಲಿ ಕರ್ನಾಟಕ ಸರ್ಕಾರ ತೋರುತ್ತಿರುವ ನಿರಾಸಕ್ತಿ ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಮಹಾರಾಷ್ಟ್ರದಲ್ಲಿ ಯಾವುದೇ ಸರ್ಕಾರ ಅಸ್ತಿತ್ವಕ್ಕೆ ಬರಲಿ ಗಡಿವಿವಾದಕ್ಕೆ ಕೊಡುವ ಆದ್ಯತೆಯನ್ನು ಮತ್ಯಾವುದಕ್ಕೂ ನೀಡುವುದಿಲ್ಲ. ಈ ಹಿಂದೆ ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ ಸರ್ಕಾರ ಸುಪ್ರೀಂಕೋರ್ಟ್‍ನಲ್ಲಿರುವ ಗಡಿವಿವಾದ ನೋಡಿಕೊಳ್ಳಲು ಪ್ರತ್ಯೇಕ ಸಚಿವರನ್ನು ನೇಮಿಸಿತ್ತು. ಕೊಲ್ಲಾಪುರದ ಉಸ್ತುವಾರಿ ಸಚಿವರಾಗಿದ್ದ ಚಂದ್ರಕಾಂತ ಪಾಟೀಲ ಗಡಿ ಉಸ್ತುವಾರಿ ಸಚಿವರೂ ಆಗಿದ್ದರು.
ಈಗ ಮಹಾರಾಷ್ಟ್ರದಲ್ಲಿ ಶಿವಸೇನೆ - ಕಾಂಗ್ರೆಸ್-ಎನ್‍ಸಿಪಿ ನೇತೃತ್ವದ ಮೈತ್ರಿ ಸರ್ಕಾರ ಸಹ ಗಡಿವಿವಾದ ನೋಡಿಕೊಳ್ಳಲು ಇಬ್ಬರು ಸಚಿವರನ್ನು ನೇಮಿಸಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಏಕನಾಥ ಶಿಂಧೆ ಹಾಗೂ ಛಗನ್ ಬುಜ್ಬಲ್ ಇಬ್ಬರಿಗೂ ಗಡಿ ಉಸ್ತುವಾರಿ ಜವಾಬ್ದಾರಿ ನೀಡಿದ್ದಾರೆ. ಆ ಮೂಲಕ ಗಡಿ ಬಗ್ಗೆ ತಮಗಿರುವ ಕಾಳಜಿಯನ್ನು ತೋರಿಸಿದ್ದಾರೆ.
ಫಡ್ನವೀಸ್‍ಗೆ ಠಕ್ಕರ್ ಕೊಟ್ಟಿದ್ದ ಸಿದ್ದು:ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿ ಆಗಿದ್ದಾಗ ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ಗಡಿವಿವಾದ ನೋಡಿಕೊಳ್ಳಲು ಮಹಾ ಸರ್ಕಾರ 2015ರಲ್ಲಿ ಚಂದ್ರಕಾಂತ್ ಪಾಟೀಲ ಅವರನ್ನು ಗಡಿ ಉಸ್ತುವಾರಿ ಪಟ್ಟ ಕಟ್ಟಿತ್ತು. ಫಡ್ನವೀಸ್ ಉರಳಿಸಿದ್ದ ದಾಳಕ್ಕೆ ಪ್ರತ್ಯುತ್ತರ ನೀಡಿದ್ದ ಸಿದ್ದರಾಮಯ್ಯ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಎಚ್.ಕೆ.ಪಾಟೀಲ್ ಅವರನ್ನು ಗಡಿ ಉಸ್ತುವಾರಿ ಸಚಿವರನ್ನಾಗಿ ನೇಮಿಸಿದ್ದರು. ಆ ಮೂಲಕ ಮಹಾರಾಷ್ಟ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಠಕ್ಕರ್ ಕೊಟ್ಟಿದ್ದರು.
ಆದರೆ, ರಾಜ್ಯದಲ್ಲಿ ನಂತರ ಬಂದ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವಾಗಲಿ ಹಾಗೂ ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಗಡಿ ಉಸ್ತುವಾರಿ ಸಚಿವರ ನೇಮಕವಾಗಿಲ್ಲ. ಗಡಿ ಉಸ್ತುವಾರಿ ಸಚಿವರನ್ನು ನೇಮಕ ಮಾಡುವಂತೆ ಈ ಭಾಗದ ಜನರು ಒತ್ತಾಯಿಸಿದರೂ ಸರ್ಕಾರ ಮಾತ್ರ ಕಿವಿಕೊಡುತ್ತಿಲ್ಲ. ಮತ್ತೊಂದೆಡೆ ಗಡಿ ಸಂರಕ್ಷಣಾ ಆಯೋಗ ಹಾಗೂ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯನ್ನು ಬೆಳಗಾವಿಗೆ ಸ್ಥಳಾಂತರ ಮಾಡಬೇಕು ಎಂಬುವುದು ಈ ಭಾಗದ ಜನರ ಬಹುದಿನದ ಒತ್ತಾಸೆ ಆಗಿದೆ. ಕಳೆದ ಎರಡ್ಮೂರು ತಿಂಗಳಿಂದ ಗಡಿ ಸಂರಕ್ಷಣಾ ಆಯೋಗದ ಅಧ್ಯಕ್ಷರ ಹುದ್ದೆಯೂ ಖಾಲಿ ಇದ್ದು, ಹೊಸ ಅಧ್ಯಕ್ಷರ ನೇಮಕವಾಗಿಲ್ಲ. ಗಡಿ ವಿಚಾರದಲ್ಲಿ ಸಿಎಂ ಬೊಮ್ಮಾಯಿ ತೋರುತ್ತಿರುವ ನಿರಾಸಕ್ತಿ ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಠಾಕ್ರೆಗೇಕೆ ಗಡಿ ಪ್ರೀತಿ?:ಮಹಾರಾಷ್ಟ್ರದ ಪ್ರಾದೇಶಿಕ ಪಕ್ಷಗಳಾದ ಎನ್‍ಸಿಪಿ ಹಾಗೂ ಶಿವಸೇನೆಗೆ ಗಡಿ ವಿವಾದವೇ ಪ್ರಮುಖ ಅಸ್ತ್ರ. ಗಡಿ ವಿವಾದ ಜೀವಂತವಾಗಿಡಬೇಕು ಆ ಮೂಲಕ ರಾಜಕೀಯ ಲಾಭ ಪಡೆಯಬೇಕು ಎಂಬುವುದೇ ಈ ಎರಡೂ ಪ್ರಾದೇಶಿಕ ಪಕ್ಷಗಳ ಪ್ರಮುಖ ಅಜೆಂಡಾ. ಮಹಾರಾಷ್ಟ್ರದಲ್ಲಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ಎರಡೂ ಪಕ್ಷಗಳು ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆ ಹುಟ್ಟುಹಾಕಿ ಅದಕ್ಕೆ ಬೆಂಬಲವಾಗಿಯೂ ನಿಂತಿದೆ. ಆಗಾಗ ಎಂಇಎಸ್ ನಡೆಸುವ ಪ್ರತಿಭಟನಾ ರ‍್ಯಾಲಿ, ಸಮಾವೇಶಗಳಿಗೆ ಎನ್‍ಸಿಪಿ ಹಾಗೂ ಶಿವಸೇನೆ ನಾಯಕರು ಇಲ್ಲಿಗೆ ಬಂದು ಇಲ್ಲಿನ ಮರಾಠಿಗರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ.
ಒಂದು ಕಾಲದಲ್ಲಿ ಬೆಳಗಾವಿ ನಗರ, ಬೆಳಗಾವಿ ಗ್ರಾಮೀಣ ಹಾಗೂ ಖಾನಾಪುರದಲ್ಲಿ ಎಂಇಎಸ್ ಪ್ರಬಲವಾದ ಸಂಘಟನೆ ಹೊಂದಿತ್ತು. ಈ ಕಾರಣಕ್ಕೆ ಕನಿಷ್ಠ ಮೂರು ಶಾಸಕರು ಎಂಇಎಸ್‍ನಿಂದ ಆಯ್ಕೆ ಆಗುತ್ತಿದ್ದರು. 2020ಕ್ಕೂ ಮುನ್ನ ಎಂಇಎಸ್ ಹಿಡಿತದಲ್ಲೇ ಮಹಾನಗರ ಪಾಲಿಕೆ ಇತ್ತು. ಗಡಿವಿವಾದವನ್ನು ಕೇವಲ ರಾಜಕೀಯ ಲಾಭಕ್ಕಾಗಿ ಶಿವಸೇನೆ, ಎಂಇಎಸ್ ಹಾಗೂ ಎನ್‍ಸಿಪಿ ಬಳಸುತ್ತಿರುವುದನ್ನು ಈ ಭಾಗದ ಮರಾಠಿಗರು ಮನದಟ್ಟು ಮಾಡಿಕೊಂಡಿದ್ದಾರೆ.