ಕರ್ನಾಟಕ

karnataka

ETV Bharat / city

ಮಹಾರಾಷ್ಟ್ರದ ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟ ಬಿಜೆಪಿ: ಚುನಾವಣಾ ಪ್ರಚಾರಕ್ಕೆ ಕರ್ನಾಟಕ ಸಿಎಂ! - ಮಹಾರಾಷ್ಟ್ರದಲ್ಲಿ ಯಡಿಯೂರಪ್ಪ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರ್ನಾಟಕದ ಲಿಂಗಾಯತ ಸಮುದಾಯದ ಪ್ರಬಲ ನಾಯಕ. ಜೊತೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಹಿಡಿತ ಹೊಂದಿರುವ ಇವರು, ಈಗ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲು ಮುಂದಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರ

By

Published : Oct 16, 2019, 10:56 AM IST

ಬೆಳಗಾವಿ:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರ್ನಾಟಕದ ಲಿಂಗಾಯತ ಸಮುದಾಯದ ಪ್ರಬಲ ನಾಯಕ. ಜೊತೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಹಿಡಿತ ಹೊಂದಿರುವ ಇವರು, ಈಗ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲು ಮುಂದಾಗಿದ್ದಾರೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ಬಿಎಸ್​ವೈ ಈಗ ಮಹಾರಾಷ್ಟ್ರದಲ್ಲಿ ಕೂಡ ಸೂಪರ್ ಸಿಎಂ ಆಗಿ ಬಿಂಬಿತರಾಗಲಿದ್ದಾರೆ.

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರ

ಹೌದು, ಬರುವ ದಿನದಲ್ಲಿ ಮಹಾರಾಷ್ಟ್ರದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಕರ್ನಾಟಕ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಅನೇಕ ಜಿಲ್ಲೆಗಳಲ್ಲಿ ಲಿಂಗಾಯತ ಸಮಾಜಕ್ಕೆ ಸೇರಿರುವ ಮತಗಳಿವೆ. ಇವೆಲ್ಲವುಗಳನ್ನು ಲಿಂಗಾಯತ ಪ್ರಬಲ ನಾಯಕ ಎಂದು ಗುರುತಿಸಿಕೊಂಡಿರುವ ಬಿ.ಎಸ್.ಯಡಿಯೂರಪ್ಪ ಮೂಲಕ ಸೆಳೆಯುವ ಕಾರ್ಯತಂತ್ರವನ್ನು ಬಿಜೆಪಿ ಹೈಕಮಾಂಡ್ ರೂಪಿಸಿದೆ.

ಚುನಾವಣೆ ವಿಷಯದಲ್ಲಿ ಬಿಜೆಪಿ ಉಪಯೋಗಿಸುವ ಮಾನದಂಡಗಳು ತುಂಬಾ ವಿಭಿನ್ನವಾಗಿರುತ್ತವೆ. ಜೊತೆಗೆ ಜಾತಿ ಲೆಕ್ಕಾಚಾರದ ಮೇಲೆ ಚುನಾವಣೆಯಲ್ಲಿ ಲಾಭ ಪಡೆಯುವ ಜಾಣ್ಮೆಯನ್ನು ಬಿಜೆಪಿ ಪಕ್ಷ ಹೊಂದಿದೆ. ಹಾಗಾಗಿ ಈಗಾಗಲೇ ಮಹಾರಾಷ್ಟ್ರ ಚುನಾವಣೆ ಅಖಾಡಕ್ಕೆ ಧುಮುಕಿರುವ ಡಿಸಿಎಂ ಲಕ್ಷ್ಮಣ ಸವದಿ, ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ. ಜೊತೆಗೆ ರಾಜ್ಯದ ಮಹಿಳಾ ಮತ್ತು ಮಕ್ಕಳ‌ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಪತಿ, ಲೋಕಸಭಾ ಸದಸ್ಯ ಅಣ್ಣಾ ಸಾಹೇಬ್ ಜೊಲ್ಲೆ ಕೂಡ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದು, ಮಹಾರಾಷ್ಟ್ರದ ಲಿಂಗಾಯತ ಸಮುದಾಯದ ಮತಗಳನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ.

ನಾಳೆಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದು, ಎರಡು ದಿನಗಳ ಕಾಲ ಅನೇಕ ಜಿಲ್ಲೆಗಳಲ್ಲಿ ಮತಬೇಟೆ ಮಾಡಲಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ, ಸೊಲ್ಲಾಪುರ, ಅಕ್ಕಲಕೋಟೆ, ಚಕ್ಕೋರ್ ಹಾಗೂ ಲಾತೂರ್​ಗಳಲ್ಲಿ ನಡೆಯಲಿರುವ ಬಹಿರಂಗ ಸಮಾವೇಶದಲ್ಲಿ ಬಿಜೆಪಿ ಪರ ಪ್ರಚಾರ ಮಾಡಲಿದ್ದಾರೆ. ಅಷ್ಟೇ ಅಲ್ಲದೆ ಕರ್ನಾಟಕಕ್ಕೆ ಹೊಂದಿಕೊಂಡಿರುವ ದೇವರ ಗಾಣಗಾಪೂರದಲ್ಲಿಯು ಭರ್ಜರಿ ಪ್ರಚಾರ ನಡೆಸಲಿದ್ದಾರೆ.

ಇನ್ನು ಬೆಳಗಾವಿಯ ಪ್ರಬಲ ಬಿಜೆಪಿ ಮುಖಂಡರಲ್ಲಿ ಒಬ್ಬರಾದ ಡಿಸಿಎಂ ಲಕ್ಷ್ಮಣ ಸವದಿ ಕೂಡ ಮಹಾರಾಷ್ಟ್ರದ ಮೀರಜ್, ಸಾಂಗ್ಲಿ ಹಾಗೂ ಜತ್ತ ಪ್ರದೇಶದಲ್ಲಿ ಹಲವು ಬಹಿರಂಗ ಸಮಾವೇಶಗಳಲ್ಲಿ ಪ್ರಚಾರ ಮಾಡಿದ್ದಾರೆ. ಅಷ್ಟೇ ಅಲ್ಲದೆ ಗಡಿ ಭಾಗದ ಅನೇಕ ಜಿಲ್ಲೆಗಳಲ್ಲಿ ತಮ್ಮ ಹಿಡಿತ ಹೊಂದಿರುವ ಲಕ್ಷ್ಮಣ ಸವದಿಗೆ ಹೈಕಮಾಂಡ್, ಮಹಾರಾಷ್ಟ್ರ ಚುನಾವಣಾ ಉಸ್ತುವಾರಿಯಂತಹ ದೊಡ್ಡ ಜವಾಬ್ದಾರಿ ನೀಡಿದೆ.

ABOUT THE AUTHOR

...view details