ಬೆಳಗಾವಿ: ಬೆಳಗಾವಿ ಅಧಿವೇಶನದ 2ನೇ ವಾರದ ಕಲಾಪಗಳು ನಾಳೆ(ಸೋಮವಾರ) ಆರಂಭವಾಗಲಿದ್ದು, ಪ್ರತಿಪಕ್ಷಗಳ ವಿವಿಧ ಹೋರಾಟಕ್ಕೆ ಅಧಿವೇಶನ ಬಲಿಯಾಗುವ ಸಾಧ್ಯತೆ ಹೆಚ್ಚಾಗಿ ಗೋಚರಿಸುತ್ತಿದೆ.
ಅಧಿವೇಶನದ ಮೊದಲ ವಾರದ ಕೊನೆಯ ಎರಡು ದಿನಗಳು ಪ್ರತಿಪಕ್ಷಗಳ ಗದ್ದಲಕ್ಕೆ ಸಾಕ್ಷಿಯಾದವು. ಕೆಆರ್ ಪುರದಲ್ಲಿ ಅಣ್ಣಯ್ಯಪ್ಪ ಎಂಬವರಿಗೆ ಸೇರಿದ ಜಮೀನನ್ನು ಕಬಳಿಸಿರುವ ಪ್ರಕರಣ ವಿಚಾರವಾಗಿ ವಿಧಾನಸಭೆ ಹಾಗೂ ವಿಧಾನ ಪರಿಷತ್ನಲ್ಲಿ ವಿಚಾರ ಮಂಡಿಸಿದ ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಸಚಿವ ಭೈರತಿ ಬಸವರಾಜ್ ರಾಜೀನಾಮೆ ಇಲ್ಲವೇ, ಅವರ ವಜಾಕ್ಕೆ ಆಗ್ರಹಿಸಿ ಗದ್ದಲ ಎಬ್ಬಿಸಿದ್ದರು. ಇದರಿಂದಾಗಿ ಸುಗಮ ಕಲಾಪಕ್ಕೆ ತಡೆ ಉಂಟಾಗಿತ್ತು.
2ನೇ ವಾರ ಏನೇನು?:
- ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರು ನಡೆಸಿರುವ ದಾಂಧಲೆ, ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನಾಳೆಯಿಂದಲೇ ಉಭಯ ಸದನಗಳಲ್ಲಿಯೂ ಹೋರಾಟ ಆರಂಭಿಸುವ ಸಾಧ್ಯತೆ ಇದೆ.
- ಭೂಹಗರಣದ ಸಂಬಂಧ ಭೈರತಿ ಬಸವರಾಜ್ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಹೋರಾಟ ಒಂದು ತಾರ್ಕಿಕ ಅಂತ್ಯ ಕಾಣುವವರೆಗೂ ಮುಂದುವರಿಸುವುದಾಗಿ ರಾಜ್ಯ ಕಾಂಗ್ರೆಸ್ ನಾಯಕರು ಹೇಳಿಕೊಂಡಿದ್ದು, ಸೋಮವಾರವೇ ಈ ವಿಚಾರವನ್ನು ಮುಂದುವರಿಸುವ ಸಾಧ್ಯತೆ ಹೆಚ್ಚಿದೆ.
- ಬಿಟ್ ಕಾಯಿನ್ ಹಾಗೂ 40% ವಿಚಾರವನ್ನು ಕಾಂಗ್ರೆಸ್ ಪಕ್ಷ ಮೊದಲ ವಾರವೇ ಆರಂಭಿಸಿ, ದೊಡ್ಡ ಮಟ್ಟದ ಹೋರಾಟ ನಡೆಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕೆಆರ್ ಪುರ ಭೂಹಗರಣಕ್ಕಿಂತಲೂ ಇದನ್ನ ನಗಣ್ಯವಾಗಿಸಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಮಾಧ್ಯಮಗಳ ಪ್ರಶ್ನೆಗೆ ಸಮರ್ಪಕವಾಗಿ ಉತ್ತರ ನೀಡದ ಪ್ರತಿಪಕ್ಷ ನಾಯಕರು, ನಾವು ಈ ವಿಚಾರದ ಮೇಲೆ ಚರ್ಚೆಗೆ ಸಿದ್ಧವಿದ್ದೇವೆ. ಕಾಲಾವಕಾಶದ ಕೊರತೆ ಇದ್ದು, ಅಧಿವೇಶನವನ್ನು ಇನ್ನಷ್ಟು ದಿನ ವಿಸ್ತರಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದಿದ್ದಾರೆ.