ಬೆಳಗಾವಿ:ಕನ್ನಡ ರಾಜ್ಯೋತ್ಸವದ ನಿಮಿತ್ತ ಹಮ್ಮಿಕೊಳ್ಳಲಾಗಿರುವ ಕನ್ನಡಕ್ಕಾಗಿ ನಾವು ಅಭಿಯಾನದಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಲಕ್ಷ ಕಂಠ ಗೀತಗಾಯನ ನಡೆಯಿತು.
ಸುವರ್ಣ ಸೌಧ ಮೆಟ್ಟಿಲುಗಳ ಮೇಲೆ 'ಕನ್ನಡ ಗೀತಗಾಯನ' .. ರಾಷ್ಟ್ರಕವಿ ಕುವೆಂಪು ವಿರಚಿತ 'ಬಾರಿಸು ಕನ್ನಡ ಡಿಂಡಿಮವ', ನಿಸಾರ್ ಅಹಮದ್ ಅವರ 'ಜೋಗದ ಸಿರಿ ಬೆಳಕಿನಲ್ಲಿ' ಹಾಗೂ ಹಂಸಲೇಖ ಅವರ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಗೀತೆಗಳನ್ನು ಸಾವಿರಾರು ವಿದ್ಯಾರ್ಥಿಗಳು ಹಾಡುವ ಮೂಲಕ ಕನ್ನಡ ನಾಡು - ನುಡಿಯ ಪ್ರೇಮವನ್ನು ಅನಾವರಣಗೊಳಿಸಿದರು.
ಮರಾಠಿ ಶಿಕ್ಷಕ ವಿನಾಯಕ ಮೋರೆ ನೇತೃತ್ವದಲ್ಲಿ ನಡೆದ ಕನ್ನಡ ಹಾಡುಗಳ ಪ್ರಸ್ತುತಿಗೆ ನಗರದ ವಿವಿಧ ಶಾಲಾ - ಕಾಲೇಜುಗಳ ವಿದ್ಯಾರ್ಥಿಗಳು ಸಾಥ್ ನೀಡಿದರು. ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಕೂಡ ಭಾವಗೀತೆ ಹಾಡಿ ಗಮನ ಸೆಳೆದರು.
ಕನ್ನಡ ಬಳಕೆಯ ಪ್ರತಿಜ್ಞೆ:
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ದೈನಂದಿನ ವ್ಯವಹಾರಗಳಲ್ಲಿ ಕನ್ನಡ ಭಾಷೆ ಬಳಸುವ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು. ಆಡಳಿತ, ಪತ್ರ ವ್ಯವಹಾರ ಸೇರಿದಂತೆ ಪ್ರತಿ ಸಂದರ್ಭದಲ್ಲೂ ಕನ್ನಡವನ್ನೇ ಬಳಸುವುದರ ಜತೆಗೆ ಕನ್ನಡ ನಾಡಿನಲ್ಲಿ ವಾಸಿಸುವ ಕನ್ನಡೇತರ ಭಾಷಿಕರಿಗೆ ಪ್ರೀತಿಯಿಂದ ಕನ್ನಡವನ್ನು ಕಲಿಸುವುದಾಗಿ ಎಲ್ಲರೂ ಪ್ರತಿಜ್ಞೆಯನ್ನು ಸ್ವೀಕರಿಸಿದರು.
ಸಂಸದೆ ಮಂಗಳಾ ಅಂಗಡಿ ಮಾತನಾಡಿ, ಕನ್ನಡದ ಶ್ರೇಷ್ಠತೆಯನ್ನು ಸಾರುವುದು ಈ ಅಭಿಯಾನದ ವಿಶೇಷತೆಯಾಗಿದೆ. ಕನ್ನಡ ಗೀತಗಾಯನ ಅದ್ಭುತ ಕಾರ್ಯಕ್ರಮವಾಗಿದ್ದು, ಮಕ್ಕಳು ಸೇರಿದಂತೆ ಎಲ್ಲರೂ ಕೂಡ ಕನ್ನಡ ಪ್ರೇಮ ಮೆರೆಯಲು ಈ ಅಭಿಯಾನ ಉತ್ತಮ ಅವಕಾಶವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎ.ಬಿ.ಪುಂಡಲೀಕ ಮತ್ತಿತರರು ಉಪಸ್ಥಿತರಿದ್ದರು.