ಬೆಳಗಾವಿ: ಸಚಿವ ಕೆ ಎಸ್ ಈಶ್ವರಪ್ಪನವರು ಹಿರಿಯ ಸಚಿವರು. ಈ ರೀತಿ ಬಹಿರಂಗ ಪತ್ರ ಬರೆಯಬಾರದಿತ್ತು. ನಾಲ್ಕು ಗೋಡೆ ಮಧ್ಯೆ ಚರ್ಚೆ ಆಗಬೇಕಿರುವ ವಿಷಯದ ಬಗ್ಗೆ ಈಶ್ವರಪ್ಪ ಪತ್ರ ಬರೆದಿದ್ದು ಸರಿಯಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಸಿಎಂ ಬಿಎಸ್‌ವೈ ವಿರುದ್ಧ ರಾಜ್ಯಪಾಲರಿಗೆ ಕೆ ಎಸ್ ಈಶ್ವರಪ್ಪ ದೂರು ಸಲ್ಲಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶೆಟ್ಟರ್, ಈಶ್ವರಪ್ಪ ಹಿರಿಯ ಸಚಿವರಿದ್ದಾರೆ. ಅವರು ಅನುದಾನ ಹಂಚಿಕೆ ತಾರತಮ್ಯ ವಿಚಾರದ ಕುರಿತು ಈ ರೀತಿ ಬಹಿರಂಗ ಪತ್ರ ಬರೆಯ ಬಾರದಿತ್ತು. ಏನೇ ಸಮಸ್ಯೆ ಇದ್ದರೂ ರಾಜ್ಯದ ಮುಖ್ಯಮಂತ್ರಿಗಳಿದ್ದಾರೆ. ಅವರ ನಾಯಕತ್ವದಲ್ಲೇ ನಾವೆಲ್ಲಾ ಹೊರಟಿದ್ದೇವೆ.
ಸಿಎಂ ಬಿಎಸ್‌ವೈ ಜೊತೆ ಸಮಾಲೋಚನೆ ಮಾಡಬಹುದಿತ್ತು. ಇದನ್ನು ಕ್ಯಾಬಿನೆಟ್‌ನಲ್ಲಿ ಪ್ರಸ್ತಾಪಿಸಿ ಎಲ್ಲಾ ಸಚಿವರು ಸೇರಿ ಚರ್ಚಿಸಬೇಕಿತ್ತು. ಬಹಿರಂಗ ಪತ್ರ ಬರೆಯೋದು ಸರಿಯಲ್ಲ ಎಂದರು. ಸಿಎಂ ವಿರುದ್ಧದ ದೂರು ಉಪಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಉಪ ಚುನಾವಣೆಯಲ್ಲಿ ಈ ವಿಷಯ ಚರ್ಚೆಗೂ ಬರುವುದಿಲ್ಲ. ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪ್ರಸ್ತಾಪಿಸಲು ಯಾವುದೇ ವಿಷಯ ಇರಲಿಲ್ಲ. ಬಿಜೆಪಿ, ಮೋದಿ, ನಮ್ಮ ಬಗ್ಗೆ ಮಾತನಾಡಲು ಯಾವುದೇ ವಿಷಯಗಳಿಲ್ಲ. ಹೀಗಾಗಿ, ಇಂತಹದ್ದೇನಾದರೂ ಇದ್ದರೆ ಅದನ್ನೇ ದೊಡ್ಡದು ಮಾಡ್ತಾರೆ ಎಂದರು.