ಬೆಳಗಾವಿ: ಸರ್ಕಾರದಲ್ಲಿ ಇದ್ದುಕೊಂಡು ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವ ಪರಿಸ್ಥಿತಿ ನನಗೆ ಉದ್ಭವವಾಗಿಲ್ಲ. ನಾನು ಕೂಡ ಸರ್ಕಾರದ ಭಾಗವಾಗಿದ್ದೇನೆ. ಸರ್ಕಾರದ ವಿರುದ್ಧ ಯಾವುದೇ ರೀತಿಯ ಮಾತುಗಳನ್ನು ಆಡಿಲ್ಲ ಎಂದು ಕುಂದಾನಗರಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಸರ್ಕಾರದ ವಿರುದ್ಧ ಸಚಿವ ಮಾಧುಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ವಿಚಾರದ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.
ಬೆಂಗಳೂರಿನ ಯುವಕ ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕಸ್ಮಿಕವಾಗಿ ಗೃಹ ಸಚಿವರು ತಮಗೆ ಬಂದ ಮಾಹಿತಿ ಆಧಾರದ ಮೇಲೆ ಹೇಳಿದ್ದಾರೆ ಎಂದಿದ್ದೆ. ನಂತರ ಅವರೇ ತಿದ್ದುಕೊಂಡಿದ್ದಾರೆ. ಅವರು ಮಾತನಾಡಿದ ಮೇಲೆ ಏನು ಮಾತಾಡೋದಿದೆ ಅಂತಾ ಸ್ಪಷ್ಟವಾಗಿ ಹೇಳಿದ್ದೇನೆ. ವಿವಾದ ಸೃಷ್ಟಿ ಮಾಡೋದು ಸರಿಯಾ? ಅಂತಾ ಕೇಳಿದ್ರು. ಸರ್ಕಾರ ಇದಕ್ಕೆಲ್ಲ ಜವಾಬ್ದಾರಿ ಅಲ್ಲಾ, ಯಾವ ಸರ್ಕಾರವೂ ವಿವಾದ ಸೃಷ್ಟಿ ಮಾಡಲು ಇರೋದಿಲ್ಲ, ವಿವಾದ ಬಗೆಹರಿಸಲು ನಾವು ಸರ್ಕಾರ ನಡೆಸೋದು. ಶಾಂತಿ ಪಾಲನೆ, ಕಾನೂನು ಸುವ್ಯವಸ್ಥೆಗೆ ಮೊದಲ ಆದ್ಯತೆ ಅಂತಾ ಹೇಳಿದ್ದೀನಿ. ಅದನ್ನ ಹಾಳು ಮಾಡಲು ಯಾರಾದರೂ ಪ್ರಯತ್ನಿಸಿದ್ರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲರೂ ಕಾನೂನು ಗೌರವಿಸಲೇಬೇಕು ಅಂತಾ ಹೇಳಿದ್ದೀನಿ ಎಂದರು.
ಇದೊಂದು ದೊಡ್ಡ ಸಮಾಜ, ಯಾರು ಏನು ಮಾಡ್ತಾರೆ, ಏನ್ ಉದ್ದೇಶ ಇರುತ್ತದೆ ಅಂತ ಏಕಾಏಕಿ ಅರ್ಥ ಮಾಡಿಕೊಳ್ಳಲು ಹಾಗೂ ಊಹೆ ಮಾಡಲು ಆಗುವುದಿಲ್ಲ. ಘಟನೆ ನಡೆದ ನಂತರ ತನಿಖೆಗಳು ಆದ್ರೆ ಬೆಳಕಿಗೆ ಬರುತ್ತವೆ. ಎಲ್ಲರ ಹಿತದೃಷ್ಟಿಯಿಂದ ನಾವು ಕೆಲಸ ಮಾಡುತ್ತೇವೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು. ಬಿಜೆಪಿ ಬಂದಿರೋದೇ ಸಂವಿಧಾನ ಬದಲಿಸಲು ಎಂದು ಪ್ರತಿಪಕ್ಷಗಳ ಆರೋಪದ ಕುರಿತು ಮಾತನಾಡಿದ ಅವರು, ಯಾವ ಸಂವಿಧಾನ ಬದಲಾಯಿಸುತ್ತೇವೆ ಅಂತಾ ಹೇಳಿದ್ದೇವೆ?, ಎಲ್ಲಿ ಬದಲಾಯಿಸಿದ್ದೀವಿ?. ನಾವು ನಮ್ಮ ಪ್ರಣಾಳಿಕೆಯಲ್ಲಿ ಏನ್ ಹೇಳಿದ್ದೇವೋ ಅಷ್ಟು ಮಾಡಿದ್ದೀವಿ. ಸಂವಿಧಾನ ಬದಲಾಯಿಸುವ ಸ್ಥಿತಿ ದೇಶದಲ್ಲಿ ಬಂದಿದೆ ಅಂತಾ ನಮಗೆ ಗೊತ್ತಿಲ್ಲ. ನಾವ್ಯಾವತ್ತೂ ಆ ಅಜೆಂಡಾ ಇಟ್ಟುಕೊಂಡು ಬಿಜೆಪಿ ಅಧಿಕಾರಕ್ಕೆ ತಂದಿಲ್ಲ ಎಂದು ಹೇಳಿದರು.
ಕಲ್ಲಂಗಡಿ ವ್ಯಾಪಾರಿ ತೆರವು ಕುರಿತು ಹೇಳಿದ್ದು ಹೀಗೆ: ಧಾರವಾಡದಲ್ಲಿ ಕಲ್ಲಂಗಡಿ ವ್ಯಾಪಾರಿ ಮೇಲೆ ದಾಳಿ ಪ್ರಕರಣವನ್ನ ಸರ್ಕಾರದವರು ತಡೆಯೋಕಾಗಲ್ವಾ? ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಹೇಗೆ ನಿರೀಕ್ಷೆ ಮಾಡ್ತೀರಿ?. ಒಂದು ದಿವಸ ಮಾವಿನ ಹಣ್ಣಿಂದು, ಇನ್ನೊಂದು ದಿವಸ ಚಂದ್ರುಂದು. ರಾಜ್ಯದಲ್ಲಿ ಎಲ್ಲೆಲ್ಲೋ ಒಂದು ಘಟನೆ ನಡೆಯೋದಕ್ಕೆಲ್ಲಾ ಈ ರೀತಿ ಬಣ್ಣ ಕಟ್ಟೋದನ್ನು ಸರ್ಕಾರ ನಡೆಸುವವರು ನಿರೀಕ್ಷೆ ಮಾಡೋಕಾಗಿರುತ್ತಾ?. ಗಲಾಟೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು, ಸಿಎಂ ಬಸವರಾಜ ಬೊಮ್ಮಾಯಿ ತನಿಖೆ ಮಾಡ್ತೀವಿ ಅಂತಾ ಹೇಳಿದ್ದಾರೆ. ನಾನು ಕೂಡ ಹೇಳಿದ್ದೀನಿ. ವಾತಾವರಣವನ್ನ ಹಾಳು ಮಾಡುವವರ ವಿರುದ್ಧ ನಾವು ಕ್ರಮ ಜರುಗಿಸುತ್ತೇವೆ. ಯಾವ ಸರ್ಕಾರವೂ ಇದನ್ನೆಲ್ಲಾ ಸಹಿಸಲು ಆಗಲ್ಲ ಎಂದು ಹೇಳಿದರು.